×
Ad

18 ಲಕ್ಷ ರೈತರಿಗೆ 500 ಕೋಟಿ ರೂ.ಪರಿಹಾರ ವಿತರಣೆ : ಸಚಿವ ಕೃಷ್ಣ ಬೈರೇಗೌಡ

Update: 2024-06-24 15:55 IST

ಕಲಬುರಗಿ : ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ-ಅತೀ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ  ಸಂಕಷ್ಟಕ್ಕೆ ಒಳಗಾಗಿದ್ದರು. ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರೂ.‌ಗಳಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸೋಮವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ‌ ಮಾತನಾಡಿದ ಅವರು, "ಕಳೆದ ವರ್ಷ ಅತ್ಯಂತ‌ ಭೀಕರ‌ ಬರಗಾಲದಿಂದ ರೈತ ಸಮುದಾಯ ತತ್ತರಿಸಿತ್ತು. ಹೀಗಾಗಿ ರೈತ ಸಮುದಾಯದ ರಕ್ಷಣೆಗೆ ಸರಕಾರ ಮುಂದಾಗಿದೆ. ಕೇಂದ್ರ ಸರಕಾರ ಎನ್.ಡಿ.ಆರ್.ಎಫ್. ಹಣ ಬಿಡುಗಡೆಯಲ್ಲಿ‌ ವಿಳಂಬ‌ ಧೋರಣೆ ಅನುಸರಿಸಿದ ಕಾರಣ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದ ಕಾರಣ ಕೇಂದ್ರ ಹಣ ಬಿಡುಗಡೆ ಮಾಡಿತು. ಅದು ಹಣ ಸಹ ರೈತರಿಗೆ ನೀಡಲಾಗಿದೆ. ಅಲ್ಲದೆ, ಬೆಳೆ ವಿಮೆಯಡಿ 1,756 ಕೋಟಿ ರೂ. ಪರಿಹಾರ ಹಣ ರೈತರ ಖಾತೆಗೆ ನೀಡಲಾಗಿದೆ. ಒಟ್ಟಾರೆ ಬರಗಾಲ ಕಾರಣ ಎಸ್.ಡಿ.ಆರ್.ಎಫ್-ಎನ್.ಡಿ.ಆರ್.ಎಫ್ ಹಣ, ಬೆಳೆ ವಿಮೆ, ಪ್ರಕೃತಿ ವಿಕೋಪ ಪರಿಹಾರ ಹೀಗೆ ಸುಮಾರು 6,000 ಕೋಟಿ ರೂ.ಪರಿಹಾರ ಅನ್ನದಾತರಿಗೆ ಡಿ.ಬಿ.ಟಿ. ಮೂಲಕ ನೀಡಲಾಗಿದೆ" ಎಂದರು.

ಕೆರೆ‌ ಸಂರಕ್ಷಣೆಗೆ ಮುಂದಾಗಿ :

ಜಿಲ್ಲೆಗಳಲ್ಲಿ ಜಿವ ಜಲದ‌ ಮೂಲವಾಗಿರುವ  ಕೆರೆಗಳ ಸಂರಕ್ಷಣೆಗೆ ವಿಮೆ, ಆರ್.ಐ, ಸರ್ವೆ ಇಲಾಖೆ‌ ಮುಂದಾಗಬೇಕು. ಗಡಿ ಗುರುತಿಸಲು ಬಂಡ್ ಅಥವಾ ಸಾಧ್ಯವಾದರೆ ಫೆನ್ಸಿಂಗ್ ಹಾಕಬೇಕು. ತಹಶೀಲ್ದಾರರು ಇದರ ಮುಂದಾಳತ್ವ ವಹಿಸಬೇಕು ಎಂದರು.

ಸಭೆಯಲ್ಲಿ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಸರಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲ್ ಕುಮಾರ್, ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ., ಬೀದರ್ ಡಿ.ಸಿ. ಗೋವಿಂದರೆಡ್ಡಿ, ರಾಯಚೂರು ಡಿ.ಸಿ. ಚಂದ್ರಶೇಖರ ನಾಯಕ್, ಕೊಪ್ಪಳ ಡಿ.ಸಿ.ನಳಿನ್ ಅತುಲ್, ಬಳ್ಳಾರಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ ಸೇರಿದಂತೆ ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News