×
Ad

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನದಂದೇ ಭೀಮ್ ಆರ್ಮಿಯ ಕಾರ್ಯಕ್ರಮ: ಎಸ್.ಎಸ್. ತಾವಡೆ

Update: 2025-11-05 21:21 IST

ಕಲಬುರಗಿ: ಚಿತ್ತಾಪುರದಲ್ಲಿ ಆರೆಸ್ಸೆಸ್ ಯಾವಾಗ ಪಥ ಸಂಚಲನ ಮಾಡುತ್ತದೆ. ಅದೇ ದಿನದಂದೇ ಭೀಮ್ ಆರ್ಮಿ ಕೂಡ ಕಾರ್ಯಕ್ರಮ ಮಾಡಲಿದೆ ಎಂದು ಭೀಮ್ ಆರ್ಮಿ ಸಂಘಟನೆಯ ಮುಖಂಡ ಎಸ್.ಎಸ್.ತಾವಡೆ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ.5 ರಂದು (ಬುಧವಾರ) ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಗೆ ನಮ್ಮನ್ನು ಸೇರಿದಂತೆ ಉಳಿದ ಹತ್ತು ಸಂಘಟನೆಗಳಿಗೆ ಆಹ್ವಾನಿಸಿಲ್ಲ. ನಾವು ಚಿತ್ತಾಪುರದಲ್ಲಿ ಪಥ ಸಂಚಲನ ಮಾಡಬೇಕೋ ಅಥವಾ ಮಾಡಬಾರದು ಎನ್ನುವ ಕುರಿತಾಗಿ ಜಿಲ್ಲಾಡಳಿತದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದರು.

ಸಾವಿರಾರು ಮಂದಿಯನ್ನು ಸೇರಿಸಿ ಪಥ ಸಂಚಲನ ಮಾಡುವ ಸಂಘಟನೆಗೆ ನೋಂದಣಿ ಇಲ್ಲ. ಅಂತಹ ನೋಂದಣಿ ಇಲ್ಲದ ಸಂಘಟನೆಗೆ ಕಾರ್ಯಕ್ರಮ ಮಾಡಲು ಅವಕಾಶ ಏಕೆ ನೀಡುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ಜಿಲ್ಲಾಡಳಿತ ನಮ್ಮ ಭೀಮ್ ಅರ್ಮಿಯ ಸಂಘಟನೆ ಬಗ್ಗೆ ನೋಂದಣಿ, ಆಡಿಟ್ ವರದಿ ಸೇರಿದಂತೆ ಹಲವು ದಾಖಲೆಗಳನ್ನು ಕೇಳಿದೆ. ಅದನ್ನು ನಾವು ಕೊಟ್ಟಿದ್ದೇವೆ. ಆದರೆ, ನಮ್ಮನ್ನು ಕೇಳಿದಂತೆ ಆರೆಸ್ಸೆಸ್ ನವರಲ್ಲೂ ದಾಖಲೆಗಳನ್ನು ಕೇಳಲಿ ಎಂದ ಅವರು, ಆರೆಸ್ಸೆಸ್ ಯಾವ ದಿನ ಪಥ ಸಂಚಲನ ಮಾಡುತ್ತದೆಯೋ ಅದೇ ದಿನದಂದೇ ನಮ್ಮ ಕಾರ್ಯಕ್ರಮ ಹಾಗೂ ಹೋರಾಟ ಇದ್ದೆ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.

ಆರೆಸ್ಸೆಸ್ ನವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆಯೊಡ್ಡಿದ್ದಾರೆ. ನಮ್ಮ ಸಮುದಾಯದ ರಾಜಕೀಯ ನಾಯಕರನ್ನು ಹತ್ತಿಕ್ಕುವ ಕೆಲಸ ಆರೆಸ್ಸೆಸ್ ಮಾಡುತ್ತಿದೆ. ಇದರ ವಿರುದ್ದ ಭೀಮ್ ಆರ್ಮಿ ಸುಮ್ಮನೆ ಕೂರುವುದಿಲ್ಲ. ಆರೆಸ್ಸೆಸ್ ವಿರುದ್ಧ ಹೋರಾಟ ಮಾಡೇ ಮಾಡುತ್ತದೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು, ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News