×
Ad

ಸಚಿನ್ ಆತ್ಮಹತ್ಯೆ ಪ್ರಕರಣ | ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

Update: 2025-01-04 15:06 IST

ಕಲಬುರಗಿ : ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವುದು ಸೇರಿದಂತೆ ಮೃತ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕುವುದಕ್ಕೂ ಮುನ್ನ ನಗರದ ಜಗತ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ವಿಧಾನಸಭೆಯ  ವಿಪಕ್ಷನಾಯಕ ಆರ್.ಅಶೋಕ್, "ಇದು ಎಸ್.ಎಸ್ ಸರಕಾರವಾಗಿದೆ, ಎಸ್ ಅಂದರೆ ಸುಪಾರಿ ಒಂದು ಕಡೆ ಸೂಸೈಡ್, ಇನ್ನೊಂದು ಕಡೆ ಸಿದ್ದರಾಮಯ್ಯ ಮತ್ತು ಶಿವಕುಮಾರ್" ಎಂದು ಛೇಡಿಸಿದರು.

ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರನ ಸಾವಿಗೆ ಯಾರೂ ಹೊಣೆ? ಇನ್ನೂ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳಬೇಕು, ಬೀದಿಗೆ ಬರಬೇಕು? ಎಂದು ಪ್ರಶ್ನಿಸಿದರು. ಈಶ್ವರಪ್ಪ ಲಂಚ ಪಡೆದಿರಲಿಲ್ಲ, ತಪ್ಪು ಮಾಡದಿದ್ದರೂ ರಾಜೀನಾಮೆ ಕೊಟ್ಟಿದ್ದರು. ಈಗ ನೀನ್ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ, ಇದು ಕಮಿಷನ್ ಸರಕಾರವಾಗಿದೆ, ನಿಮ್ಮ ಕಮಿಷನ್ ಗಾಗಿ ಇಂದು ರಾಜ್ಯದ ಜನರು ಪರಿತಪಿಸುವಂತಾಗಿದೆ. ಇನ್ಮುಂದೆ ಆತ್ಮಹತ್ಯೆಗಳು ನಡೆಯಬಾರದು ಎಂದರೆ ಈ ಪ್ರಕರಣ ಕುರಿತಾಗಿ ಸಮಗ್ರ ತನಿಖೆಯಾಗಬೇಕು. ರಾಜು ಕಪನೂರ್ ಒಬ್ಬ ಗೂಂಡಾ ಆಗಿದ್ದಾನೆ, ಆತನ ವಿರುದ್ಧ ಇರುವ ಗೂಂಡಾ ಕಾಯ್ದೆ ತಗೆದಿದ್ದು ಕಾಂಗ್ರೆಸ್ ನವರು, ಯಾಕೆ ತೆಗೆಯಬೇಕು ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರಕಾರ ನ್ಯಾಯ ಕೊಟ್ಟಿಲ್ಲ ಅಂದರೆ ವಿರೋಧ ಮಾಡಬೇಕು. ನಾವು ಅದಕ್ಕೆ ಬಂದಿದ್ದೇವೆ, ಇಲ್ಲಿ ನ್ಯಾಯಕ್ಕಾಗಿ ನಾವು ಬಂದರೆ ಚಹಾ, ನೀರು ಕೊಡುತ್ತೇವೆ ಎಂದು ಹೇಳುತ್ತೀರಿ, ನಾವೇನು ಸಂಬಂಧ ಬೆಳೆಸಲು ಬಂದಿದ್ದೇವೆಯೇ? ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಛಲವಾದಿ ನಾರಾಯಣ ಸ್ವಾಮಿ, ಉಮೇಶ್ ಜಾಧವ್, ಬಸವರಾಜ್ ಮತ್ತಿಮಡು, ಶಶೀಲ್ ನಮೋಶಿ, ರಾಜಕುಮಾರ್ ಪಾಟೀಲ್ ತೆಲ್ಕೂರ್, ಎನ್.ರವಿಕುಮಾರ್, ಪಿ.ರಾಜೀವ್, ಸುಭಾಷ್ ಗುತ್ತೇದಾರ್, ಸುನಿಲ್ ವಲ್ಯಪುರೆ, ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶರಣಪ್ಪ ತಳವಾರ್, ಸಿದ್ದಾಜಿ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್, ಚಂದು ಪಾಟೀಲ್, ಶರಣು ಸಲಗರ್, ಬಿ.ಜಿ.ಪಾಟೀಲ್, ಶೈಲೇಂದ್ರ ಬೆಲ್ದಾಳೆ, ಅಮರನಾಥ್ ಪಾಟೀಲ್, ಅಮೀನ್ ರೆಡ್ಡಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು, ಕಾರ್ಯಕರ್ತರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News