ಸೇಡಂ | ಅಂಬಿಗರ ಚೌಡಯ್ಯ ಮೂರ್ತಿಯನ್ನು ಭಗ್ನಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ, ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಚಾರಿಟೇಬಲ್ ಮತ್ತು ವೇಲ್ ಫರ್ ಟ್ರಸ್ಟ್, ಸೇಡಂ ತಾಲೂಕು ಕೋಲಿ ಸಮಾಜ ಹಾಗೂ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಸೇಡಂ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸೇಡಂ ಪಟ್ಟಣದ ಶ್ರೀ ಕೋತ್ತಲ ಬಸವೇಶ್ವರ ದೇವಾಲಯದಿಂದ ನಡೆದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ವರೆಗೆ ತಲುಪಿದ ಬಳಿಕ ಮುಖಂಡರು ಮಾನವ ಸರಪಳಿ ನಿರ್ಮಿಸಿದರು. ಇದೇ ವೇಳೆಯಲ್ಲಿ ರಿಬ್ಬನಪಲ್ಲಿ ಹೈವೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮುಖಂಡ ಸಿದ್ದು ಬಾನಾರ್ ಮಾತನಾಡಿ, ಮುತ್ತಗಾ ಗ್ರಾಮದಲ್ಲಿ ಸ್ಥಾಪಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಾಜದಲ್ಲಿ ಸಾರ್ವಜನಿಕ ಶಾಂತಿಗೆ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ಕೆಲಸದಿಂದ ಅಶಾಂತಿಯ ಮತ್ತು ಕೋಮು ಸಾಮರಸ್ಯ ಕದಡಿದ್ದನ್ನು ಮತ್ತು ಕೋಲಿ ಸಮಾಜದ ಜನತೆಯ ಭಾವನೆಗಳನ್ನು ಕೆರಳಿಸಿದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪಿಸಲು ಸಿಎಂ ಸಿದ್ದರಾಮಯ್ಯನವರು ಮುಂದಾಗಬೇಕು, ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಸೇವಾ ಚಾರಿಟೇಬಲ್ ಹಾಗೂ ವೇಲ್ ಫರ್ ಟ್ರಸ್ಟ್ ಅಧ್ಯಕ್ಷರಾದ ಡಾ.ಶ್ರೀನಿವಾಸ ಶ್ಯಾಮಪ್ಪ ಮುಕದಮ್, ನಾಗಪ್ಪ ಹಣಮಂತ ಕೋಳಿ, ಸೋಮಶೇಖರ್ ಗುಂಡಪ್ಪ ಹೊಸಮನಿ, ಭೀಮರಾಯ ಹಣಮಂತ ಕೋಡ್ಲಾ, ಜಗನ್ನಾಥ ಸಿದ್ದಪ್ಪ ಪಾಟೀಲ್, ಕಾಶಪ್ಪ ನೀಡಗುಂದ, ಸತ್ಯಕುಮಾರ ಬಾಗೊಡಿ, ರಾಘವೇಂದ್ರ ಮೆಕಾನಿಕ್, ಕೋಲಿ ಕಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮೆಕಾನಿಕ್, ಸಂತೋಷಕುಮಾರ ತಳವಾರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.