ಶಹಾಬಾದ್ | ಗಿರಿಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಶಹಾಬಾದ್: ಕಟ್ಟೆಯ ಮೇಲೆ ಅನಾವಶ್ಯಕವಾಗಿ ಕಾಲ ಕಳೆಯುವ ಯುವಕರ ನಡುವೆ ಸಮಾಜಕ್ಕೆ ಶಿಕ್ಷಣ ಹಾಗೂ ಸಾಹಿತ್ಯವನ್ನು ಪಸರಿಸುವ ನಿಟ್ಟಿನಲ್ಲಿ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅತ್ಯಂತ ಸಂತೋಷದಾಯಕ ಸಂಗತಿ ಎಂದು ಬರಹಗಾರ ಕೆ.ಎಂ. ವಿಶ್ವನಾಥ ಮರತೂರು ಹೇಳಿದರು.
ನಗರದ ಜಗದಂಬಾ ದೇವಸ್ಥಾನದ ಸಭಾಂಗಣದಲ್ಲಿ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ, ಯಾದಗಿರಿ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ, 2025ನೇ ಸಾಲಿನ ಗಿರಿಸಿರಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಈ ಸಂಸ್ಥೆ ಪ್ರತಿ ವರ್ಷ ಎಲೆಯ ಮರೆಯ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಅಭಿನಂದನಾರ್ಹ ಕಾರ್ಯವಾಗಿದೆ ಎಂದರು.
ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಮುಂದುವರೆಸಲಿ ಎಂದು ಆಶಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಕಲ್ಲಿನ ನಾಡಿನಲ್ಲಿ ಶಿಕ್ಷಣ ಹಾಗೂ ಉದ್ಯೋಗ ಗಗನಕುಸುಮವಾಗಿರುವ ಸಂದರ್ಭದಲ್ಲಿ ಸಾಹಿತ್ಯದ ಚಿಲುಮೆಯನ್ನು ಹರಿಯುವಂತೆ ಮಾಡುವ ಕಾರ್ಯ ಗಿರಿಸಿರಿ ಸಂಸ್ಥೆಯಿಂದ ನಡೆಯುತ್ತಿದೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸತ್ಕಾರ ಮಾಡುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ದಸಂಸ ಮುಖಂಡರಾದ ಸುರೇಶ ಮೆಂಗನ್ ಹಾಗೂ ಆರಕ್ಷಕ ನಿರೀಕ್ಷಕ ನಟರಾಜ ಲಾಡೆ ಮಾತನಾಡಿ, ಸಂಸ್ಥೆ ಇನ್ನಷ್ಟು ಬೆಳವಣಿಗೆ ಹೊಂದಿ ಸಮಾಜಮುಖಿ ಚಟುವಟಿಕೆಗಳನ್ನು ಮುಂದುವರೆಸಲಿ ಎಂದು ಶುಭ ಹಾರೈಸಿದರು.
ಗಿರಿಸಿರಿ ಸಂಸ್ಥೆಯ ಅಧ್ಯಕ್ಷ ಮರಲಿಂಗ ಯಾದಗಿರಿ ಮಾತನಾಡಿದರು. ಹಲಕರ್ಟಿಯ ರಾಜಶೇಖರ್ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಲೋಹಿತ್ ಕಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಅಶೋಕ ಯಾದಗಿರಿ, ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ಬಾಲರಾಜ ಮಾಚನೂರ, ಪತ್ರಕರ್ತ ರಮೇಶ ಭಟ್ಟ, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಶರಣು ಪಗಲಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2025ನೇ ಸಾಲಿನ ಗಿರಿಸಿರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರದಾನ ಮಾಡಲಾಯಿತು. ಕವಿಗೋಷ್ಠಿಯನ್ನೂ ಆಯೋಜಿಸಲಾಗಿತ್ತು.
ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಕಾರ್ಯಕ್ರಮ ನಿರೂಪಿಸಿದರು. ದುರ್ಗಷ್ಟ ಪೂಜಾರಿ ಸ್ವಾಗತಿಸಿ, ಅನಿಲಕುಮಾರ ಮೈನಾಳಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಯಲ್ಲಾಲಿಂಗ ಹೈಯ್ಯಾಳಕರ್, ಬಸವರಾಜ ಮಯೂರ, ಪರಶುರಾಮ ಛಲವಾದಿ, ಭರತ್ ಧನ್ನಾ, ಶಂಕರ ಜಾನಾ, ಭಿಮಯ್ಯ ಗುತ್ತೇದಾರ್, ಲಕ್ಷ್ಮೀಕಾಂತ ಕಂದಗೂಳ ಸೇರಿದಂತೆ ಇತರರು ಉಪಸ್ಥಿತರಿದ್ದರು.