×
Ad

ಶಹಾಬಾದ್‌ | ಈ ನಾಡಿನ ಸಾಂಸ್ಕೃತಿಕ ರಾಯಭಾರಿ ಕುವೆಂಪು : ಮಲ್ಲಿನಾಥ ಪಾಟೀಲ

Update: 2025-12-30 23:22 IST

ಶಹಾಬಾದ್: ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಹಾನ್ ಸಾಹಿತಿ ಹಾಗೂ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಕುವೆಂಪು ಅವರನ್ನು ಕನ್ನಡ ಜನತೆ ಗುರುತಿಸಿದೆ ಎಂದು ಎಸ್.ಜಿ. ವರ್ಮಾ ಹಿಂದಿ ಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಹೇಳಿದರು.

ಸೋಮವಾರ ನಗರದ ಎಸ್.ಜಿ. ವರ್ಮಾ ಹಿಂದಿ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಶಾಶ್ವತ ನಾಯಕ ಕುವೆಂಪು ಎಂಬುದನ್ನು ಕನ್ನಡ ಮನಸ್ಸುಗಳು ಹೃದಯಪೂರ್ವಕವಾಗಿ ಅಂಗೀಕರಿಸಿದ್ದೇವೆ ಎಂದು ತಿಳಿಸಿದರು.

ಕುವೆಂಪು ಅವರಿಗೆ ಬೇರೆ ಯಾವುದೇ ಸಾಹಿತಿಗೆ ಸಿಗದಂತಹ ಗೌರವ ಶ್ರೀಸಾಮಾನ್ಯರಿಂದ ದೊರೆತಿದ್ದು, ಅದು ಅವರು ಕರ್ನಾಟಕ ರತ್ನ, ರಾಷ್ಟ್ರಕವಿ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿದ್ದಕ್ಕಾಗಿ ಮಾತ್ರವಲ್ಲ. ತಮ್ಮ ಸಾಹಿತ್ಯದಲ್ಲಿ ಹೃದಯವಂತಿಕೆ, ವಿಶಾಲ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿದ ಕಾರಣಕ್ಕಾಗಿ ಈ ಗೌರವ ಲಭಿಸಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲ ಸಾಹಿತಿಯಾಗಿರುವ ಕುವೆಂಪು ಅವರು, ಮೂಢನಂಬಿಕೆ ವಿರೋಧಿ ಸಾಹಿತ್ಯ ಕೃಷಿಯ ಮೂಲಕ ಇಡೀ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. 20ನೇ ಶತಮಾನದ ಶ್ರೇಷ್ಠ ಸಾಹಿತಿಯಾಗಿರುವ ಅವರು ಮಹಾನ್ ದಾರ್ಶನಿಕ ಹಾಗೂ ವೈಚಾರಿಕ ಕವಿಯಾಗಿದ್ದಾರೆ ಎಂದು ಮಲ್ಲಿನಾಥ ಪಾಟೀಲ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಾಬಣ್ಣ ಗುಡುಬಾ ಹಾಗೂ ದೈಹಿಕ ಶಿಕ್ಷಕ ಚನ್ನಬಸಪ್ಪ ಕೊಲ್ಲೂರ್ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ರಮೇಶ ಜೋಗದನಕರ್, ಚಂದುಲಾಲ ಬಸೂದೆ, ಗೀತಾ ಸಿಪ್ಪಿ, ರಂಜಿತಾ ಹಿರೇಮಠ, ಭಾರತಿ ಚವ್ಹಾಣ, ಸುರೇಖಾ ಜಾಯಿ, ಶೋಭಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News