×
Ad

ಶಹಾಬಾದ್ | ಗೋಳಾ(ಕೆ) ಗ್ರಾಮದಲ್ಲಿ ತೆರಿಗೆ ಬಾಕಿ ಸಂಗ್ರಹಕ್ಕೆ ವಿಶೇಷ ಅಭಿಯಾನ

Update: 2026-01-03 22:06 IST

ಶಹಾಬಾದ್‌ : ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿಯ ಗೋಳಾ(ಕೆ) ಗ್ರಾಮದಲ್ಲಿ “ತೆರಿಗೆ ಪಾವತಿ” ಘೋಷಣೆಯೊಂದಿಗೆ ಗ್ರಾಪಂ ಪಿಡಿಓ ನಿಂಗಪ್ಪ ಕೆಂಭಾವಿ ತೆರಿಗೆ ಬಾಕಿ ಸಂಗ್ರಹಕ್ಕೆ ಈ ಬಾರಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತೆರಿಗೆ ಪಾವತಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಪಂ ಪಿಡಿಓ ನಿಂಗಪ್ಪ ಕೆಂಭಾವಿ ಅವರ ನೇತೃತ್ವದಲ್ಲಿ ಮನೆಮನೆಗೆ ಭೇಟಿ ನೀಡಿ ತೆರಿಗೆ ಪಾವತಿಗೆ ಮನವಿ ಮಾಡಲಾಗುತ್ತಿದೆ.

ಗ್ರಾಮ ಪಂಚಾಯತ್‌ಗಳು ಬಾಕಿ ಇರುವ ತೆರಿಗೆಗಳನ್ನು ಸಂಗ್ರಹಿಸುವ ಮೂಲಕ ಆದಾಯವನ್ನು ಹೆಚ್ಚಿಸಿ, ಸ್ವಂತ ಸಂಪನ್ಮೂಲಗಳಿಂದ ಗ್ರಾಮಗಳ ಅಭಿವೃದ್ಧಿಗೆ ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕರವಸೂಲಿಗಾರರು, ಜಲಗಾರರು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯಚಟುವಟಿಕೆ ಆರಂಭಿಸಲಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳು, ನಿವೇಶನಗಳು, ವಾಣಿಜ್ಯ ಮಳಿಗೆಗಳು ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದ್ದು, ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ತೆರಿಗೆ ಪಾವತಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಂಗ್ರಹವಾಗುವ ಹಣವನ್ನು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬಳಸಲಾಗುತ್ತದೆ. ಈ ವಿಶೇಷ ಅಭಿಯಾನದ ಮೂಲಕ ಹೆಚ್ಚಿನ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಪಿಡಿಓ ನಿಂಗಪ್ಪ ಕೆಂಭಾವಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News