×
Ad

ಅತಿಥಿ ಶಿಕ್ಷಕರ ವೇತನ ವಿಳಂಬ; ಪರಿಷತ್‌ನಲ್ಲಿ ಪ್ರಸ್ತಾಪಿಸಿದ ಶಶೀಲ್ ನಮೋಶಿ

Update: 2025-03-06 22:59 IST

 ಶಶೀಲ್ ಜಿ.ನಮೋಶಿ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದಾದ್ಯಂತ ಇರುವ ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿದ್ದು, ಶಿಕ್ಷಕರ ಕೊರತೆ ನೀಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಆಗ್ರಹಿಸಿದರು.

ವಿಧಾನ ಪರಿಷರ್‌ನಲ್ಲಿಂದು ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಪ್ರತಿದಿನ ದೂರದ ಪ್ರದೇಶದಿಂದ ಶಾಲೆಗಳಿಗೆ ಬರುತ್ತಿರುವ ಅತಿಥಿ ಶಿಕ್ಷಕರ ವೇತನ ನೀಡದೆ, ವಿಳಂಬ ಮಾಡಿತ್ತಿರುವುದರಿಂದ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜುಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡು ಹಂತದಲ್ಲಿ ಶಿಕ್ಷಕರ ನೇಮಕಾತಿ ನಡೆದಿದೆ. ಆದರೆ ಯಾವೊಬ್ಬ ಶಿಕ್ಷಕರಿಗೂ ಸರಕಾರದಿಂದ ಇಲ್ಲಿಯವರೆಗೂ ಒಂದು ರೂ.ಸಂಬಳ ದೊರೆತಿಲ್ಲ ಎಂದು ಸದನಕ್ಕೆ ತಿಳಿಸಿದ್ದರು.

ಈ ಹಿಂದೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳು ಸಮರ್ಥ  ಬೋಧನೆಯಿಂದ ವಂಚಿತರಾಗುತ್ತಿದ್ದರು. ಸರಕಾರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದರಿಂದ ಶಾಲೆಗಳಲ್ಲಿ ತರಗತಿಗಳು ಸುಗಮವಾಗಿ ನಡೆಯಲು ಅನುಕೂಲವಾಗಿದೆ. ಆದರೆ ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡದಿರುವುದು ಸಮಸ್ಯೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ನಿಯಮದಂತೆ ಜಿ.ಪಂ ಅನುದಾನದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10,000 ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ 10.500 ರೂಪಾಯಿ ಪ್ರತಿ ತಿಂಗಳು ವೇತನ ಪಾವತಿಯಾಗಬೇಕು. ಕಳೆದ 7 ತಿಂಗಳಿಂದ ತಡವಾಗಿ ವೇತನ ನೀಡಲಾಗುತ್ತಿದೆ ಎಂಬ ಗೋಳು ಮುಂದುವರೆದಿದೆ. ಒಮ್ಮೆ ಅನುದಾನ ಇರುವುದಿಲ್ಲ, ಬಂದರೂ ತಡವಾಗಿ ಬರುತ್ತದೆ. ನಂತರ ಬಿಇಒ ಕಚೇರಿ ಅಧಿಕಾರಿಗಳು ಆಯಾ ಶಾಲೆಯ ಎಚ್‌ಎಂಗಳಿಂದ ಶಿಕ್ಷಕರ ಹಾಜಿರಾತಿ ತರಿಸಿಕೊಂಡು ವೇತನದ ಬಿಲ್ ರೆಡಿ ಮಾಡಿ ಉಪ ಖಜಾನೆಗೆ ಕಳುಹಿಸಬೇಕು. ಅದು ಅಲ್ಲಿಂದ ಪಾಸಾದ ಬಳಿಕ ಸಂಬಳವನ್ನು ಆಯಾ ಶಾಲೆಯ ಮುಖ್ಯಗುರುಗಳ ಖಾತೆಗೆ ಜಮಾ ಮಾಡಿದ ಬಳಿಕ ಅವರು ಶಿಕ್ಷಕರ ಹೆಸರಿನ ಮೇಲೆ ಚೆಕ್ ನೀಡುತ್ತಾರೆ. ನಂತರ ಸಂಬಳ ದೊರೆಯುತ್ತದೆ. ಹೀಗಾಗಿ ಅತಿಥಿ ಶಿಕ್ಷಕರ ವೇತನ ಪ್ರತಿ ವರ್ಷ ತಡವಾಗಿಯೇ ಸಿಗುತ್ತಿದೆ ಎಂದರು.

ಭೋದನೆ ನೀಡುವ ಅತಿಥಿ ಶಿಕ್ಷಕರ ಜೀವನ ನಿರ್ವಹಣೆಯ ವಿಚಾರವಾಗಿರುವುದರಿಂದ ಈ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಳಿಕ ಸಭಾಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋಮವಾರ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು ಎಂದು ನಮೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News