ಕಲಬುರಗಿನಾದ್ಯಂತ ಮಾ.8 ರವರೆಗೆ ಸಾಮಾಜಿಕ ಕ್ರೂಢೀಕರಣ ಆಂದೋಲನ: ಸಿಇಓ ಭಂವರ್ ಸಿಂಗ್ ಮೀನಾ
ಭಂವರ್ ಸಿಂಗ್ ಮೀನಾ
ಕಲಬುರಗಿ : ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ 2025ರ ಮಾ.8 ರವರೆಗೆ ಜಿಲ್ಲೆಯಾದ್ಯಂತ ಸಾಮಾಜಿಕ ಕ್ರೂಢೀಕರಣ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಪ್ರತಿ ಕುಟುಂಬದ ಒಬ್ಬ ಮಹಿಳೆ ಸ್ವ-ಸಹಾಯ ಗುಂಪುಗಳಲ್ಲಿ ಸೇರ್ಪಡೆಗೊಳಿಸುವುದು ಈ ಸಾಮಾಜಿಕ ಕ್ರೂಢೀಕರಣ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿಗೆ ಹೊಸದಾಗಿ 70,000 ಕುಟುಂಬಗಳನ್ನು ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು, ಎಂಬಿಕೆ, ಎಲ್ಸಿಆರ್ಪಿ, ಪಶು ಸಖಿ, ಕೃಷಿಸಖಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಎನ್ಆರ್ಎಲ್ಎಂ ಘಟಕಕ್ಕೆ ಭೇಟಿ ನೀಡಿ ಸ್ವ-ಸಹಾಯ ಸಂಘಗಳು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.