×
Ad

ಕುಸನೂರ ವ್ಯಾಪ್ತಿಯ ನಾಲ್ಕು ಸಾವಿರ ಮನೆಗಳಿಗೆ ಶುದ್ಧ ನೀರು ಪೂರೈಕೆ : ಶಾಸಕ ಮತ್ತಿಮಡು

Update: 2025-02-12 21:48 IST

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಯಾದ ಮನೆ ಮನೆಗೆ ಶುದ್ಧ ನೀರು ಪೂರೈಸುವ ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯನ್ನು ಕಲಬುರಗಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜಾರಿಗೆ ತರುತ್ತಿದ್ದು, ಇದೀಗ ಕುಸನೂರ ವ್ಯಾಪ್ತಿಯ ನಾಲ್ಕು ಸಾವಿರ ಮನೆಗಳಿಗೆ ಶುದ್ಧ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಶಹಾಬಾದ್ ತಾಲೂಕಿನ ಕುಸನೂರ ಗ್ರಾಮದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 2022-23ನೇ ಸಾಲಿನ ಜಲ್ ಜೀವನ್ ಮಿಷನ್ ಯೋಜನೆ ಅಡಿ ಕುಸನೂರ ಗ್ರಾಮದ ಮನೆ ಮನೆಗೆ ನಲ್ಲಿ ನೀರು ಪೂರೈಸುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಕುಸನೂರ ಗ್ರಾಮದ ವ್ಯಾಪ್ತಿಯಲ್ಲಿನ ಶ್ರೀ ಸಿದ್ದೇಶ್ವರ ಕಾಲನಿ, ಸರಸ್ವತಿ ನಗರ, ಕೃಷ್ಣ ನಗರ, ಶ್ರೀ ನಗರ, ಮಹರ್ಷಿ ನಗರಗಳ ಪ್ರತಿ ಮನೆಗೆ ಮನೆಗೆ ಶುದ್ಧ ನೀರು ಪೂರೈಸಲಾಗುತ್ತದೆ ಎಂದು ಹೇಳಿದರು.

ಕುಸನೂರ ಗ್ರಾಮದ ವ್ಯಾಪ್ತಿಯಲ್ಲೇ 5.48 ಕೋಟಿ ರೂ. ಅನುದಾನದಲ್ಲಿ 58 ಕಿ.ಮೀ. ಪೈಪ್ಲೈನ್ ಸೇರಿ ವಿವಿಧ ಕಾಮಗಾರಿಗಳನ್ನು ಮಾಡಿ, ಪ್ರತಿ ಮನೆಗೆ ನಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಐದು ಲಕ್ಷ ಲೀಟರ್ನ ಮೂರು ಬೃಹತ್ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಕುಸನೂರ ತಾಂಡಾ, ಸಣ್ಣೂರ, ಸಣ್ಣೂರ ತಾಂಡಾ, ಹಾಳ್ ತಾಂಡಾ, ಮಲ್ಲಯ್ಯನ ತಾಂಡಾ, ಪಾಳಾ ಗ್ರಾಮಗಳಲ್ಲಿ ಶುದ್ಧ ನೀರು ಪೂರೈಸುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಪ್ರತ್ಯೇಕವಾಗಿ 5.48 ಕೋಟಿ ರೂ. ಅನುದಾನವನ್ನು ಕುಸನೂರ ಗ್ರಾಮದಲ್ಲೇ ಶುದ್ಧ ನೀರು ಪೂರೈಸುವ ಕಾಮಗಾರಿ ಆರಂಭಿಸಲಾಗುತ್ತಿದೆ. ಹೆಚ್ಚುವರಿ ಹಣ ಬೇಕಾದರೆ ನೀಡಲಾಗುವುದು ಎಂದು ತಿಳಿಸಿದರು.

ಕುಸನೂರ ಜೆಡಿಎ ವ್ಯಾಪ್ತಿಗೆ ಸೇರಿದ್ದರೂ ಸಹ ಅಭಿವೃದ್ಧಿ ಮಾಡಲಾಗುತ್ತಿದೆ. ಜೆಜೆಎಂ ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಗ್ರಾಮದಲ್ಲಿ ಪ್ರತಿಯೊಬ್ಬರೂ ಕಾಮಗಾರಿ ಮೇಲೆ ನಿಗಾ ಇಡಬೇಕು. ಸಹಕಾರ ನೀಡಿ, ಉತ್ತಮ ಕೆಲಸ ಮಾಡಿಸಿಕೊಳ್ಳಬೇಕು. ಕುಸನೂರ ಗ್ರಾಮದಲ್ಲಿ ಸಾರ್ವಜನಿಕ ಭವನ ನಿರ್ಮಿಸಲು 50 ಲಕ್ಷ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.

ಶ್ರೀ ಮಲಯ್ಯ ಮುತ್ಯಾ, ಗ್ರಾಪಂ ಅಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಮುಖರಾದ ಶಿವಕುಮಾರ ಪಾಟೀಲ್ ಜಂಬಗಾ, ಸಂಗಮೇಶ ವಾಲಿ, ವಿನೋದ ಪಾಟೀಲ್ ಸರಡಗಿ, ವೀರೇಶ ಹಂಗರಗಿ, ನಾಗಣ್ಣ ತೆಗ್ಗಿನ ಮನಿ, ರಾಜಕುಮಾರ ಗುತ್ತೇದಾರ್, ರಾಜು ಚವ್ಹಾಣ್, ಪಿ.ಜಿ.ರಾಠೋಡ್, ಶಿವಕುಮಾರ ಗುತ್ತೇದಾರ್ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.

ಪ್ರತಿ ಮನೆಗೆ ಶುದ್ಧ ನೀರು ಪೂರೈಸುವ ಗುರಿಯೊಂದಿಗೆ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮಟ್ಟದಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರಸ್ತುತ ಏಳು ಕೋಟಿ ರೂ. ವೆಚ್ಚದಲ್ಲಿ ಏಳು ಹಳ್ಳಿಗಳಿಗೆ ಶುದ್ಧ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿದ್ದು, ಗುಣಮಟ್ಟದೊಂದಿಗೆ ಪೂರ್ಣಗೊಳಿಸಲಾಗುವುದು. ಹೆಚ್ಚುವರಿ ಅನುದಾನ ನೀಡಲಾಗುವುದು.

-ಬಸವರಾಜ ಮತ್ತಿಮಡು ಶಾಸಕ ಕಲಬುರಗಿ ಗ್ರಾಮೀಣ

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News