ಕಲಬುರಗಿ | 4.42 ಲಕ್ಷ ರೂ. ದುರ್ಬಳಕೆ ಆರೋಪ; ಶಿಕ್ಷಕ ಅಮಾನತು
ಕಲಬುರಗಿ: ಸರಕಾರದ 4.42 ಲಕ್ಷ ರೂ. ದುರ್ಬಳಕೆ ಮಾಡಿರುವ ಆರೋಪದಲ್ಲಿ ಸರಕಾರಿ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿ ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ನವನಾಥ ಶಿಂಧೆ ಎಂಬಾತ ಅಮಾನತುಗೊಂಡ ಶಿಕ್ಷಕ.
ಸಹ ಶಿಕ್ಷಕರಾಗಿರುವ ನವನಾಥ ಶಿಂದೆ 2024ರ ಎಪ್ರಿಲ್ ನಿಂದ 2025ರ ಸೆಪ್ಟಂಬರ್ ತನಕ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಹಣ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ರಾಜಕುಮಾರ್ ಪಾಟೀಲ್ ಹಾಗೂ ಬಸಪ್ಪ ಬಿರಾದಾರ ನೇತೃತ್ವದಲ್ಲಿ ಇಬ್ಬರು ಶಿಕ್ಷಕರ ತನಿಖಾ ತಂಡ ರಚಿಸಲಾಗಿತ್ತು. ನವನಾಥ್ ಶಿಂಧೆಯವರ ಅವಧಿಯಲ್ಲಿ 4.42 ಲಕ್ಷ ರೂ. ದುರ್ಬಳಕೆ, ಸರಕಾರದಿಂದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆಯಾಗಿದ್ದ ಹಣವನ್ನು ಬೇಕಾಬಿಟ್ಟಿ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ತನಿಖಾ ವರದಿ ಆಧರಿಸಿ, ಬಿಇಓ ವಿಜಯಕುಮಾರ್ ಜಮಖಂಡಿ ಕರ್ತವ್ಯ ಲೋಪದ ಅಡಿಯಲ್ಲಿ ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.
ನವನಾಥ್ ಸಿಂಧೆ ಸದ್ಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರಗಿ ದಕ್ಷಿಣ ವಲಯದ ಕಾರ್ಯದರ್ಶಿಯೂ ಆಗಿದ್ದಾರೆ.