ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ : ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ
ಕಲಬುರಗಿ: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಬೇಕು. ಆದರೆ, ಸಿದ್ದರಾಮಯ್ಯನವರು ತಾವೇ ಹೇಳಿಕೊಂಡಿರುವುದು ನೋಡಿದರೆ ಕೇಂದ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಬದುಕಿದೆಯೋ ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಅವರು ಹೇಳಿದ್ದಾರೆ.
ನಗರದಲ್ಲಿ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಮುಖ್ಯಮಂತ್ರಿ ಯಾರು ಎನ್ನುವುದನ್ನು ಘೋಷಣೆ ಮಾಡಬೇಕು. ಆದರೆ, ಇಲ್ಲಿ ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ, ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳುತ್ತಿದ್ದಾರೆ. ನೀವೇ ಸಿಎಂ ಎಂದಾದ ಮೇಲೆ ದಿಲ್ಲಿಯಲ್ಲಿದ್ದಾಗ ಹೈಕಮಾಂಡ್ ಭೇಟಿಗೆ ಏಕೆ ಅವಕಾಶ ಕೊಡಲಿಲ್ಲ. ಕ್ರಾಂತಿ ಆಗುತ್ತದೋ, ವಾಂತಿ ಆಗುತ್ತದೋ ಒಂದು ಗೊತ್ತಿಲ್ಲ ಎಂದು ಹೇಳಿದರು.
ಸದ್ಯ ದೇಶದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ನಿರ್ನಾಮವಾಗಿದೆ. ಕರ್ನಾಟಕದಲ್ಲಿ ಅಲ್ಪ-ಸ್ವಲ್ಪ ಬದುಕುಳಿದಿದೆ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲ ಇರುವುದು ನಿಜ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರಿಗಳಿಗೆ ಈ ಸರಕಾರ ಇರುತ್ತೋ, ಹೋಗುತ್ತೋ ಎಂದು ಗೊಂದಲ ಉಂಟಾಗಿದೆ ಎಂದರು.
ಆರೆಸೆಸ್ಸ್ ಇರುವುದಕ್ಕೆ ದೇಶದಲ್ಲಿ ಹಿಂದುತ್ವ ಉಳಿದಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಹಿಡಿದ ಹುಚ್ಚು ವಾಸಿ ಮಾಡಲು ಪ್ರಪಂಚದಲ್ಲಿ ಯಾವ ಆಸ್ಪತ್ರೆಯು ಇಲ್ಲ. ಆರೆಸೆಸ್ಸ್ ಬಗ್ಗೆ ಮಾತಾನಾಡಲು ಅವರು ಯಾರು? ಎಂದು ಪ್ರಶ್ನಿಸಿದರು.