×
Ad

ಕಲಬುರಗಿ | ಕುರುಬ ಸಮಾಜ ಶೈಕ್ಷಣಿಕವಾಗಿ ಬಲಿಷ್ಠವಾಗಬೇಕು : ಶಾಸಕ ಎಂ.ವೈ. ಪಾಟೀಲ್ ಕರೆ

Update: 2025-11-08 19:15 IST

ಕಲಬುರಗಿ : ಇಂದಿನ ದಿನಗಳಲ್ಲಿ ಕುರುಬ ಸಮಾಜ ಶೈಕ್ಷಣಿಕವಾಗಿ ಬಲಿಷ್ಠವಾಗಬೇಕು ಎಂದು ಅಫಜಲಪುರದ ಶಾಸಕ ಎಂ. ವೈ ಪಾಟೀಲ್ ಹೇಳಿದರು.

ಅಫಜಲಪುರ ತಾಲೂಕು ಆಡಳಿತ ಮತ್ತು ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಘಟಕ ಇವರ ಆಶ್ರಯದಲ್ಲಿ  ಗುರುಭವನದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನಕದಾಸರು ಕನ್ನಡ ಸಾಹಿತ್ಯಕ್ಕೆ ಮತ್ತು ಕರ್ನಾಟಕದ ಸಂಸ್ಕೃತಿಗೆ ಅಪಾರವಾದಂತಹ ಕೊಡುಗೆ ಕೊಟ್ಟು ಕರುನಾಡನ್ನು ಸಂಸ್ಕೃತವಾಗಿ ಶ್ರೀಮಂತ ಗೊಳಿಸಿದ್ದಲ್ಲದೆ ತಮ್ಮ ಅನುಯಾಯಿಗಳಿಗೆ ಸಮಾನತೆ, ಪ್ರೀತಿ, ಸೌಹಾರ್ದ ಮತ್ತು ಕರುಣೆಯ ಸಂದೇಶವನ್ನು ನೀಡಿದ್ದಾರೆ. ಕುರುಬ ಸಮುದಾಯವು ಹೃದಯ ಶ್ರೀಮಂತ ಜನಾಂಗವಾಗಿದ್ದು, ತಮ್ಮಲ್ಲಿ ಆರ್ಥಿಕ ಶ್ರೀಮಂತಿಕೆಯ ಜೊತೆ ಜೊತೆಗೆ ಅಪಾರವಾದ ಶ್ರಮಜೀವನ, ಶ್ರದ್ಧೆ, ನಿಷ್ಠೆ, ಗುಣಗಳು ತುಂಬಿ ತುಳುಕುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಆರ್ಥಿಕ ತಜ್ಞರಾಗಿದ್ದು ಪಂಚ ಗ್ಯಾರಂಟಿಗಳನ್ನು ನೀಡಿ ಕರ್ನಾಟಕವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು.

"ಮುಖ್ಯಮಂತ್ರಿಗಳ ಆಶಯದಂತೆ ಸಮುದಾಯವು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಬಲಗೊಳ್ಳಬೇಕಾಗಿದೆ. ಅದಕ್ಕಾಗಿ ತಾಲೂಕು ಕೇಂದ್ರ ಸ್ಥಾನವಾದ ಅಫಜಲಪುರದಲ್ಲಿ ಕುರುಬ ಸಮಾಜಕ್ಕಾಗಿ ಸಮುದಾಯ ಭವನದ ಬೇಡಿಕೆ ಇದೆ. ಅದನ್ನು ಈಡೇರಿಸುವುದು ಮತ್ತು ಸಮುದಾಯದ ನಾಯಕರಿಗೆ ರಾಜಕೀಯವಾಗಿ ನ್ಯಾಯ ಬದ್ಧವಾದ ಸ್ಥಾನಮಾನಗಳನ್ನು ನೀಡುವುದರಲ್ಲಿ ಕಾಂಗ್ರೆಸ್ ಪಕ್ಷ ಮತ್ತು ನಾನು ಕಟಿಬದ್ಧರಾಗಿದ್ದೇವೆ" ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ರಮೇಶ್ ಪೂಜಾರಿ, ಕನಕದಾಸರ ಸಾಹಿತ್ಯವನ್ನು ಓದುವ ಮೂಲಕ ಅದನ್ನು ಜೀವನದಲ್ಲಿ ಅಳ ವಡಿಸಿಕೊಳ್ಳಬೇಕು ಎಂದರು.

ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೆ.ಜಿ. ಪೂಜಾರಿ ಅವರು, ಕನಕದಾಸರು ಹರಿಭಕ್ತಿಸಾರ, ಮೋಹನತರಂಗಿಣಿ, ರಾಮಧಾನ್ಯ ಚರಿತೆ, ಮುಂತಾದ ಕೃತಿಗಳನ್ನು ನೀಡಿ "ನೀನು ಮಾಯೆಯೋ ಮಾಯೆ ನಿನ್ನೊಳಗೂ" ಎಂದು ಹೇಳಿದರು. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕುರುಬ ಸಮಾಜ ಮುಂದುವರಿಯಬೇಕು. ಕುಲಶಾಸ್ತ್ರದ ಅಧ್ಯಯನ ಪ್ರಕಾರ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜವನ್ನು ಸೇರಿಸಬೇಕು. ಯಾವುದೇ ಜಾತಿಯ ಮೀಸಲಾತಿ ಕಸಿಯಲು ಕುರುಬ ಸಮಾಜ ಬಯಸುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೊರಕಿಸಿಕೊಟ್ಟ ಮೀಸಲಾತಿ ಕೊಡಬೇಕು ಎಂದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಮಾದಾರ್ ಮಾತನಾಡಿ, ಸಮಾನತೆ, ಸೋದರತ್ವ ಬೋಧಿಸಿದ ಕನಕದಾಸರು ಮನದಲ್ಲಿ ಕಪಟವಿಟ್ಟುಕೊಂಡು ತಪ, ಜಪ ಮಾಡಿದರೇನು ಫಲ? ಎಂದು ಕೇಳಿದ್ದಾರೆ" ಎಂದರು.

ಸಭೆಯಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ಬಗಲಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪಪ್ಪು ಪಟೇಲ್, ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿ, ಹಾಲುಮತ ಸಮಾಜದ ಮುಖಂಡ ಜಕ್ಕಪ್ಪ ಪೂಜಾರಿ, ದಲಿತ ಸಂಘರ್ಷ ಸಮಿತಿಯ ಮುಖಂಡ ಮಹಾಂತ ಬಳುಂಡಗಿ, ರವಿ ಶೆಟ್ಟಿ,ಅಫಜಲ್ಪುರ್ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ ಜಾಂಗೊಂಡ, ಕಾಂಗ್ರೆಸ್ ಮುಖಂಡ ಮತ್ತು ಹಾಲುಮತ ಸಮಾಜದ ನಾಯಕರಾದ ಜೆ.ಎಂ ಕೋರಬು, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಸಿದ್ಧಾರ್ಥ ಬಸರಿ ಗಿಡದ, ದಲಿತ ಮುಖಂಡ ಭೀಮರಾಯ ಗೌರ, ಪ್ರವೀಣ ಕಲ್ಲೂರ್, ಅಫ್ಜಲ್ಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ಗಾಡಿ, ಅಪ್ಪಣ್ಣ ಪೂಜಾರಿ, ರಾಜು ಆರೇಕರ್, ಯಲ್ಲಾಲಿಂಗ ಪೂಜಾರಿ, ಅಫ್ಜಲ್ಪುರ ತಾಲೂಕು ದಂಡಾಧಿಕಾರಿ ಸಂಜೀವಕುಮಾರ್ ದಾಸರ, ಕುರುಬ ಸಮಾಜದ ಹಿರಿಯ ಮುಖಂಡ ರಮೇಶ್ ನೀಲಗಾರ್, ಭೀರಣ್ಣ ಕನಕ ಟೇಲರ, ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

ಯಲ್ಲಾಲಿಂಗ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಕೀಲರಾದ ಗುರು ಪೂಜಾರಿ ವಂದಿಸಿದರು.  


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News