ʼಅಕ್ಷರದವ್ವ ಸಾವಿತ್ರಿಬಾಯಿ ಫುಲೆʼ ಪ್ರಶಸ್ತಿಗೆ ಕಲಬುರಗಿಯಿಂದ ಮೂವರು ಆಯ್ಕೆ
ಕಲಬುರಗಿ : ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗುರುತಿಸಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ” ನೀಡಲಾಗುತ್ತಿದ್ದು, 2026ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಈ ಬಾರಿ ಕಲಬುರಗಿ ಜಿಲ್ಲೆಯಿಂದ ಮೂವರು ಮಹಿಳಾ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಎಂ.ಕಾಂಬಳೆ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿಯಾದ ಡಾ.ಪುಟ್ಟಮಣಿ ದೇವಿದಾಸ ಅವರನ್ನು ಶೈಕ್ಷಣಿಕ ಮತ್ತು ಸಾಹಿತ್ಯಕ ಕ್ಷೇತ್ರ ಮತ್ತು ಸರ್ಕಾರಿ ಆಟೋನೂಮಸ್ ಪದವಿ ಮಹಾವಿದ್ಯಾಲಯ ಕಲಬುರಗಿಯ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರನ್ನು ಶೈಕ್ಷಣಿಕ ಕ್ಷೇತ್ರ ಹಾಗೂ ಪತ್ರಕರ್ತೆ ಗೀತಾ ಹೊಸಮನಿ ಅವರನ್ನು ಮಾಧ್ಯಮ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಆಯ್ಕೆಯಾದ ಮೂವರು ಸಾಧಕಿಯರು ತಮ್ಮ ವೃತ್ತಿಪರ ಸೇವೆಯ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜಕ್ಕೆ ಆದರ್ಶರಾಗಿದ್ದಾರೆ ಎಂದು ಅವರು ಹೇಳಿದರು.
ಇವರಿಗೆ ಇದೇ ಜ.3ರಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಮಾತೆ ಸಾವಿತ್ರಿಬಾಯಿ ಫುಲೆ ಅವರ 195ನೇ ಜನ್ಮ ಜಯಂತಿ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ʼಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿʼ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.