ಅಫಜಲಪುರ | ಕಬ್ಬು ಕಟಾವು ಹೆಸರಿನಲ್ಲಿ ರೈತರಿಗೆ ವಂಚನೆ ಆರೋಪ : ರೇಣುಕಾ ಸಕ್ಕರೆ ಕಾರ್ಖಾನೆ ಎದುರು ರೈತರ ಪ್ರತಿಭಟನೆ
ಅಫಜಲಪುರ : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಹೆಸರಿನಲ್ಲಿ ರೈತರನ್ನು ವ್ಯವಸ್ಥಿತವಾಗಿ ವಂಚಿಸುತ್ತಿವೆ ಎಂದು ಆರೋಪಿಸಿ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘಗಳ ನೇತೃತ್ವದಲ್ಲಿ ಗುರುವಾರ ತಾಲೂಕಿನ ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಪರ ಹೋರಾಟಗಾರರಾದ ಶ್ರೀಮಂತ ಬಿರಾದಾರ, ಗುರು ಚಾಂದಕವಟೆ ಮತ್ತು ರಮೇಶ್ ಪಾಟೀಲ ಅವರು, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿರುವ ಸಕ್ಕರೆ ಕಾರ್ಖಾನೆಗಳು, ಇದೀಗ ಕಬ್ಬು ಕಟಾವು ಗ್ಯಾಂಗ್‌ಗಳ ಮೂಲಕ ಅಕ್ರಮ ಹಣ ವಸೂಲಿಗೆ ಇಳಿದಿರುವುದು ಅಸಹ್ಯಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಎಕರೆಗೆ ರೂ.5,000 ರಿಂದ ರೂ.10,000 ವರೆಗೆ ಹಣ ವಸೂಲಿಗೆ ಇಳಿದಿದ್ದಾರೆ ಇದು ರೈತರ ಮೇಲೆ ಶೋಷಣೆ ಆಗುತ್ತಿದೆ ಎಂದು ಆರೋಪಿಸಿದರು.
ಒಂದು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ವಿಭಾಗ, ಸಾಗಾಣಿಕೆ ಹಾಗೂ ಕಟಾವು ವಿಭಾಗಗಳಲ್ಲಿ 70ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ, ಕಬ್ಬು ನಾಟಿಯಿಂದ ಸರ್ವೆ ಹಾಗೂ ಅಂತಿಮ ಕಟಾವುವರೆಗೆ ಜವಾಬ್ದಾರಿ ಹೊಂದಿರುವ ಈ ವಿಭಾಗಗಳು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು 12 ತಿಂಗಳು ಪೂರ್ತಿಯಾಗುವ ಮೊದಲು ಕಬ್ಬು ಕಟಾವು ಮಾಡಬಾರದು. ಅದಕ್ಕಿಂತ ಮುಂಚಿತವಾಗಿ ಕಟಾವು ಮಾಡಿದರೆ ಇಳುವರಿ ಕುಂಠಿತವಾಗುತ್ತದೆ. ಈ ಕುರಿತು ರೈತರು ಪರಸ್ಪರ ಸಹಕಾರದಿಂದ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಒಂದು ಕಡೆ ಕಬ್ಬಿಗೆ ಸಮರ್ಪಕ ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಔಷಧಿ ಹಾಗೂ ಗೊಬ್ಬರದ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆ ಸಿಬ್ಬಂದಿಯ ವರ್ತನೆ ‘ಗಾಯದ ಮೇಲೆ ಬರೆ ಎಳೆದಂತೆ’ ರೈತರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಹಿರಿಯತನದ ಆಧಾರದ ಮೇಲೆ ಕಬ್ಬು ಕಟಾವು ನಡೆಯದೆ ಇರುವುದರಿಂದ ಇಳುವರಿ ಕುಸಿಯುವ ಭೀತಿ ಹೆಚ್ಚಿದ್ದು, 12 ತಿಂಗಳೊಳಗೆ ಕಟಾವು ಆಗದಿದ್ದರೆ ಉತ್ಪಾದನೆಗೆ ಭಾರೀ ಹಾನಿಯಾಗಲಿದೆ. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ರೇಣುಕಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಬ್ಬು ಅಭಿವೃದ್ಧಿ ಮಂಡಳಿ ಅಧಿಕಾರಿ ಚಿದಾನಂದ ಹಿರೇಮಠ ಮಾತನಾಡಿ, ತಕ್ಷಣ ಸಭೆ ಕರೆದು ಅಕ್ರಮ ಹಣ ವಸೂಲಿಯನ್ನು ತಡೆಯಲಾಗುವುದು ಹಾಗೂ ಹಿರಿಯತನದ ಆಧಾರದ ಮೇಲೆ ಕಬ್ಬು ಕಟಾವು ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಲ್ಲಪ್ಪ ಮ್ಯಾಕೇರಿ, ಬಸವರಾಜ ಪಾಟೀಲ, ಜಗಲೆಪ್ಪ ಪೂಜಾರಿ, ಸಂತೋಷ ಮಾಲಿಪಾಟೀಲ, ಸಂಗಣ್ಣ ನಾರಶೇರ, ಬಸವರಾಜ ಗಾಣೂರ, ರಾಜುಗೌಡ ಬಿರಾದಾರ, ಅರ್ಜುನ ಕುಂಬಾರ, ಭೀಮನಗೌಡ, ಪುಂಡಲಿಕ ಸೋಲಾಪೂರ, ಸುರೇಶ್ ಪಾಟೀಲ, ಕಾಮಣ್ಣ ಹೂಗಾರ, ಕಾಮಣ್ಣಗೌಡ ಪಾಟೀಲ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.