ಕಲಬುರಗಿ ರೊಟ್ಟಿಯನ್ನು ಜಾಗತಿಕ ಬ್ರ್ಯಾಂಡ್ ಆಗಿಸುವ ಗುರಿ: ಸಾಹಿತ್ಯ ಆಲದಕಟ್ಟಿ
'ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್-2026'ಗೆ ಐಡಿಯಾ ನೀಡುವವರಿಗೆ ಅಪೂರ್ವ ಅವಕಾಶ
ಕಲಬುರಗಿ : ಜಿಐ (GI) ಟ್ಯಾಗ್ ಪಡೆದಿರುವ ಕಲಬುರಗಿ ಖಡಕ್ ರೊಟ್ಟಿಯನ್ನು ಜಾಗತಿಕ ಆಹಾರ ಬ್ರ್ಯಾಂಡ್ ಆಗಿ ರೂಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಜಿಲ್ಲಾಡಳಿತವು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದಲ್ಲಿ ‘ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್-2026’ ಕಾರ್ಯಕ್ರಮವನ್ನು ಆಯೋಜಿಸಿದೆ.
ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಕಲಬುರಗಿ ಖಡಕ್ ರೊಟ್ಟಿಯನ್ನು ದೇಶ-ವಿದೇಶಗಳಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ಹೊಸ ಉದ್ಯಮ, ಉತ್ಪನ್ನ ಅಭಿವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಸಂಬಂಧಿಸಿದ ನವೀನ ಆಲೋಚನೆಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಯುವಕರು, ಗೃಹಿಣಿಯರು, ಸ್ಟಾರ್ಟ್‌ಅಪ್ ಸ್ಥಾಪಕರು ಹಾಗೂ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಖಡಕ್ ರೊಟ್ಟಿ ಹಾಗೂ ಅದರ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವ ಉದ್ಯಮ ಮಾದರಿಗಳು, ಬ್ರ್ಯಾಂಡಿಂಗ್ ತಂತ್ರಗಳು ಹಾಗೂ ಸ್ಟಾರ್ಟ್‌ಅಪ್ ಯೋಜನೆಗಳನ್ನು ಆರು ಸದಸ್ಯರ ತಂಡಗಳ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜುಲೈ 6ರಂದು ನಗರದ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಪ್ರಾಥಮಿಕ ಸ್ಕ್ರೀನಿಂಗ್ ನಡೆಯಲಿದ್ದು, ಜುಲೈ 12ರಂದು ಅಂತಿಮ ಸುತ್ತು ಆಯೋಜಿಸಲಾಗುತ್ತದೆ. ಆಯ್ಕೆಯಾಗುವ ತಂಡಗಳಿಗೆ ಇನ್‌ಕ್ಯುಬೇಷನ್, ಸೀಡ್ ಫಂಡಿಂಗ್ ಪಡೆಯಲು ನೆರವು ಹಾಗೂ ಉದ್ಯಮ ಸ್ಥಾಪನೆಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಆಸಕ್ತರು ಜುಲೈ 5ರೊಳಗೆ ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಮೂಲಕ ಗೂಗಲ್ ನೋಂದಣಿ ನಮೂನೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಗೆ ಯಾವುದೇ ವಯೋಮಿತಿ ಇಲ್ಲ. ಹೆಚ್ಚಿನ ಮಾಹಿತಿಗಾಗಿ 7259885680 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ‘ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್-2026’ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಪ್ರೊಬೇಷನರ್ ಐಎಎಸ್ ಅಧಿಕಾರಿ ಶಿಖರ್ ಮೋಘಾ, ಕೆಡಿಇಎಂನ ಬಿಯಾಂಡ್ ಬೆಂಗಳೂರು ಉಪಾಧ್ಯಕ್ಷ ಚೇತನ ದೀಕ್ಷಿತ್ ಹಾಗೂ ಕ್ಲಸ್ಟರ್ ಹೆಡ್ ಸುಜಯ್ ಮುದಗಲ್ ಉಪಸ್ಥಿತರಿದ್ದರು.