×
Ad

ಸ್ಥಳೀಯ ಕೋರ್ಟಿನ ಕೆಲಸವೇ ನ್ಯಾಯ ವ್ಯವಸ್ಥೆಯ ಅಡಿಪಾಯ: ನ್ಯಾಯಮೂರ್ತಿ ಮಹ್ಮದ್ ನವಾಝ್

Update: 2025-07-05 23:53 IST

ಕಲಬುರಗಿ: ಆಳಂದ ತಾಲೂಕು ಕೋರ್ಟಗಳ ವಕೀಲರು ನ್ಯಾಯ ವ್ಯವಸ್ಥೆಯ ಅತ್ಯಂತ ಮಹತ್ವದ ಸ್ತಂಭಗಳಾಗಿದ್ದು, ಸ್ಥಳೀಯ ಮಟ್ಟದ ಕೋರ್ಟಿನಲ್ಲಿ ನೀವು ಹಾಕುವ ಅಡಿಪಾಯದಂತೆ ಮೇಲ್ಮಟ್ಟದ ಕೋರ್ಟುಗಳಲ್ಲಿ ಪ್ರಕರಣಗಳು ಸಾಗುತ್ತವೆ. ಉತ್ತಮ ಡ್ರಾಫ್ಟಿಂಗ್ ಮಾಡುವುದರಿಂದ ಹಾಗೂ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಹಾದಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುವುದರಿಂದ ನ್ಯಾಯ ವ್ಯವಸ್ಥೆ ಸದೃಢವಾಗುತ್ತದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶರೂ ಆಗಿರುವ ಕಲಬುರಗಿ ಆಡಳಿತಾತ್ಮಕ ನ್ಯಾಯಮೂರ್ತಿ ಮಹ್ಮದ್ ನವಾಝ್ ಅವರು ಹೇಳಿದರು.

ಆಳಂದ ಪಟ್ಟಣದ ನ್ಯಾಯಾಲಯದಲ್ಲಿ ಸ್ಥಳೀಯ ನ್ಯಾಯವಾದಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಆಶ್ರಯದಲ್ಲಿ ಶನಿವಾರ ಆರಂಭವಾದ ಮೂರು ದಿನಗಳ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಬಾರಿ ಮೇಲ್ಮಟ್ಟದ ಕೋರ್ಟುಗಳಲ್ಲಿ ವಿಚಾರಣೆ ನಡೆಯುವ ವೇಳೆ, ಕೇಸಿನ ಹಿಂದಿನ ತೀರ್ಪುಗಳ ದಾಖಲೆಗಳನ್ನು ವಕೀಲರು ಸರಿಯಾಗಿ ಒದಗಿಸದೆ ಹೋದರೆ ನ್ಯಾಯದ ವಿಳಂಬ ಅಥವಾ ತೊಂದರೆ ಉಂಟಾಗುತ್ತದೆ. ಎಲ್ಲಾ ನ್ಯಾಯಮೂರ್ತಿಗಳೂ ಪರಿಪೂರ್ಣರಾಗಿರುವುದಿಲ್ಲ. ನ್ಯಾಯ ನೀಡುವಲ್ಲಿ ನಮಗೆ ವಕೀಲರ ಸಹಕಾರ ಅತ್ಯಗತ್ಯ. ವಕೀಲರು ನ್ಯಾಯಮೂರ್ತಿಗಳಿಗೆ ಸೂಕ್ತ ಸಲಹೆ, ಮಾಹಿತಿ ನೀಡುವ ಮೂಲಕ ನ್ಯಾಯದ ಪರಿಪೂರ್ಣತೆಯತ್ತ ಕರೆದೊಯ್ಯಬೇಕು ಎಂದು ತಮ್ಮ ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಹಾಗೂ ವೃತ್ತಿಪರ ನಿಷ್ಠೆಯಿಂದ ನಡೆಸಬೇಕು ಎಂದು ನ್ಯಾಯವಾದಿಗಳಿಗೆ ಅವರು ಕರೆ ನೀಡಿದರು.

ಜಿಲ್ಲಾ ಮುಖ್ಯ ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿ ನಾರಾಯಣ ಅವರು ಮಾತನಾಡಿ, ಕೇಸ್ ಯಾವುದೇ ರೀತಿಯಾಗಿರಲಿ ವಕೀಲರು ಶ್ರಮಪಡಬೇಕು. ಕೇಸು ಸೋಲು ಗೆಲವು ಲೆಕ್ಕಿಸದೆ ಪ್ರಕರಣ ನಡೆಸಲು ನಿರ್ಲಕ್ಷ್ಯ ವಹಿಸದೆ ಉತ್ತಮ ಕೆಲಸ ಮಾಡಿದರೆ ಕಕ್ಷಿದಾರರು ನಿಮ್ಮನು ಹುಡಿಕೊಂಡು ಬರುತ್ತಾರೆ ಎಂದು ಹೇಳಿದರು.

ಕರ್ನಾಟಕ ವಕೀಲ ಪರಿಷತ್ತಿನ ಅಧ್ಯಕ್ಷ ಎಸ್.ಎಸ್. ಮಿತ್ತಲಕೋಡ್ ಅವರು ಮಾತನಾಡಿ, ವಕೀಲರ ಸಂಘದ ಹಾಗೂ ವಕೀಲರ ಏನೆ ಸಮಸ್ಯೆಗಳನ್ನು ಗಮನಕ್ಕೆ ತನ್ನಿ ಪರಿಷತ್ತಿನಿಂದ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭಧಲ್ಲಿ ಆಳಂದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಮನ್ ಚಿತರಗಿ, ಜಿಲ್ಲಾ ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ವಿ. ಪ್ರಸಾದ, ಹೈಕೋರ್ಟ್ ಯುನಿಟ್ ವಕೀಲರ ಸಂಘದ ಉಪಾಧ್ಯಕ್ಷ ಎ.ಎಸ್.ಜಾಗಿರದಾರ, ಜಿಲ್ಲಾ ನ್ಯಾಯಾಯವಾದಿ ಸಂಘದ ಉಪಾಧ್ಯಕ್ಷೆ ಆರತಿ ರಾಠೋಡ, ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಗುಪ್ತಲಿಂಗ ಬಿರಾದಾರ, ತಾಲೂಕು ಕಾರ್ಯದರ್ಶಿ ಬಿ.ಟಿ.ಸಿಂಧೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ತಾಲೂಕು ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ ರಾಠೋಡ ಸ್ವಾಗತಿಸಿದರು. ನ್ಯಾಯವಾದಿ ಮಹಾದೇವ ಹತ್ತಿ ನಿರೂಪಿಸಿದರು.

ಜಿಲ್ಲೆಯಲ್ಲಿನ ವಿವಿಧ ಕೋರ್ಟ್ಗಳ ನ್ಯಾಯವಾದಿಗಳು, ಸರ್ಕಾರಿ ವಕೀಲರು ಮತ್ತು ಸ್ಥಳೀಯ ನ್ಯಾಯವಾದಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಕಾನೂನು ಕಾರ್ಯಾಗಾರದ ಗೋಷ್ಠಿಗಳು ಜರುಗಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News