ಯಡ್ರಾಮಿ | ಕಡಕೋಳ ಮಡಿವಾಳಪ್ಪ ಸಂಶೋಧನಾ ಕೇಂದ್ರಕ್ಕೆ ಆಗ್ರಹಿಸಿ ಜ.12 ರಂದು ಸಿಎಂ ವೇದಿಕೆಗೆ ಪಾದಯಾತ್ರೆ
ಯಡ್ರಾಮಿ: ಕಡಕೋಳ ಮಡಿವಾಳಪ್ಪನವರ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ, ಕಡಕೋಳ ಮಡಿವಾಳೇಶ್ವರರ ಕರ್ತೃ ಗದ್ದಿಗೆಯಿಂದ ಯಡ್ರಾಮಿ ಪಟ್ಟಣದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಠದ ಪೀಠಾಧಿಪತಿಗಳಾದ ಡಾ.ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ಯಡ್ರಾಮಿ ಪಟ್ಟಣದಲ್ಲಿ ಸೋಮವಾರ (ಜ.12) ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆಯವರೆಗೆ ಅಪಾರ ಸಂಖ್ಯೆಯ ಭಕ್ತರೊಂದಿಗೆ ಪಾದಯಾತ್ರೆ ನಡೆಸಿ, ಸಿಎಂ ಅವರಿಗೆ ನೇರವಾಗಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಕಡಕೋಳ ಮಡಿವಾಳಪ್ಪನವರು 12ನೇ ಶತಮಾನದ ಶರಣರಂತೆ ಸಮಾನತೆಯ ಸಂದೇಶ ಸಾರಿದವರು. ಸಾವಿರಾರು ತತ್ವಪದಗಳ ಮೂಲಕ ಜಾತೀಯತೆ, ಕಂದಾಚಾರ ಮತ್ತು ಸಾಮಾಜಿಕ ಶೋಷಣೆಯನ್ನು ಖಂಡಿಸಿದ ಮಹಾನ್ ತತ್ವಜ್ಞಾನಿ. ಕಡಕೋಳದಲ್ಲಿ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿ ಅನುಭವ ಮಂಟಪ ನಡೆಸಿದ ಇಂತಹ ದಾರ್ಶನಿಕರ ಕ್ಷೇತ್ರವನ್ನು ಸರ್ಕಾರಗಳು ಸತತವಾಗಿ ಕಡೆಗಣಿಸುತ್ತಿವೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಿಎಂ ದಿ. ಧರ್ಮಸಿಂಗ್ ಅವರ ಕಾಲದಿಂದಲೂ ಮಠದ ಅಭಿವೃದ್ಧಿಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಪ್ರಸ್ತುತ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾಗಿರುವ ಡಾ.ಅಜಯ್ ಸಿಂಗ್ ಅವರು ಮೂರು ಬಾರಿ ಆಯ್ಕೆಯಾದರೂ ಕಡಕೋಳದ ಅಭಿವೃದ್ಧಿಗೆ ಗಮನ ಹರಿಸಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಅಧ್ಯಯನ ಕೇಂದ್ರದ ಬಗ್ಗೆ ಸಿಎಂ ಅವರ ಭೇಟಿ ಮಾಡಿಸುವ ಬದಲು, ಅಧಿಕಾರಿಗಳ ಭೇಟಿ ಮಾಡಿಸಿ ಕಾಟಾಚಾರದ ನಡೆ ಪ್ರದರ್ಶಿಸಿದ್ದಾರೆ ಎಂದು ಅವರು ದೂರಿದರು.
ರಾಜಕಾರಣಿಗಳು ಭರವಸೆ ಈಡೇರಿಸದ ಕಾರಣ, ಭಕ್ತರೊಂದಿಗೆ ಸ್ವತಃ ಪಾದಯಾತ್ರೆ ಕೈಗೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನ್ಯಾಯ ಕೇಳುವುದಾಗಿ ಶ್ರೀಗಳು ತಿಳಿಸಿದ್ದಾರೆ.