ಕಲಬುರಗಿ | ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಕಲಬುರಗಿ: ನಗರದಲ್ಲಿ ಜ.8ರಂದು ನಡೆದ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ಇಂಗ್ಲಿಷ್ ಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ. 8ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಇಂಗ್ಲಿಷ್ ಭಾಷಾ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷೆ ಆರಂಭಕ್ಕೂ ಮೊದಲೇ ಅನಾಮಿಕ ವ್ಯಕ್ತಿಗಳು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಗಂಭೀರ ಲೋಪವನ್ನು ಪರಿಗಣಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಸುರೇಶ್ ಅಕ್ಕಣ್ಣ ಅವರು, ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುರೇಶ್ ಅಕ್ಕಣ್ಣ ಅವರ ದೂರಿನ ಮೇರೆಗೆ ಸ್ಟೇಷನ್ ಬಝಾರ್ ಪೊಲೀಸರು, ಠಾಣೆ ಗುನ್ನೆ 02/2026 ಕಲಂ:03 ಪಬ್ಲಿಕ್ ಎಕ್ಸಾಮಿನೇಷನ್ (ಪ್ರಿವೆಂಶನ್ ಆಫ್ ಅನ್ಸರ್ ಮೀನ್ಸ್) ಆಕ್ಟ್ 805 ಮತ್ತು 324(2) ಬಿ.ಎನ್.ಎಸ್ ಮತ್ತು ಕಲಂ:24(ಎ) ದಿ ಕರ್ನಾಟಕ ಎಶುಕೇಶನ್ ಎಕ್ಸ್ 1983 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.