×
Ad

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಕೈಬಿಡಲು ಷಡ್ಯಂತ್ರ: ಶಾಸಕ ಎ.ಕೆ.ಎಂ.ಅಶ್ರಫ್ ಆರೋಪ

"ನಕಲಿ ದೂರು ಸಲ್ಲಿಸಿರುವ ಬಿಜೆಪಿ ಮುಖಂಡನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ"

Update: 2026-02-14 11:24 IST

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಆರೋಪಿಸಿದ್ದಾರೆ.

ಅಧಿಕಾರಿಗಳ ಸಹಕಾರದೊಂದಿಗೆ ಒಂದು ಸಮುದಾಯದ ಮತದಾರರ ಹೆಸರುಗಳನ್ನು ಮಾತ್ರ ತೆಗೆದುಹಾಕಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಅವರು ದೂರಿದರು. ನಕಲಿ ದೂರು ಸಲ್ಲಿಸಿರುವ ಬಿಜೆಪಿ ಮುಖಂಡನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

70 ವರ್ಷದ ವೃದ್ಧ ಸೇರಿದಂತೆ ಹಲವರ ವಿರುದ್ಧ ‘ಸ್ಥಳದಲ್ಲಿ ಇಲ್ಲ’ ಎಂಬ ನೆಪ ನೀಡಿ ಸುಳ್ಳು ದೂರುಗಳನ್ನು ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪೈವಳಿಕೆ ಗ್ರಾಮ ಪಂಚಾಯತ್‌ನ 128ನೇ ಮತಗಟ್ಟೆಯಲ್ಲಿ ಏಳು ಮಂದಿಯ ವಿರುದ್ಧ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಇದೇ ಪ್ರದೇಶದಲ್ಲಿ ಹುಟ್ಟಿ ಹಲವು ವರ್ಷಗಳಿಂದ ಮತದಾನದ ಹಕ್ಕು ಚಲಾಯಿಸುತ್ತಿರುವವರ ಹೆಸರನ್ನೇ ತೆಗೆದುಹಾಕಲು ಅಧಿಕಾರಿಗಳ ಒತ್ತಾಸೆಯಿಂದ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

2016ರಲ್ಲಿ 89 ಮತಗಳ ಅಂತರದಿಂದ ಹಾಗೂ 2021ರಲ್ಲಿ 745 ಮತಗಳ ಅಂತರದಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಸೋಲು ಕಂಡಿದೆ. ಇದರಿಂದ ಯುಡಿಎಫ್ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಕುತಂತ್ರ ನಡೆಯುತ್ತಿದೆ ಎಂದು ಹೇಳಿದರು.

ಬಿಎಲ್ಒಗಳು ಈ ಕುರಿತು ಸೂಕ್ತ ಗಮನ ಹರಿಸಬೇಕು. ಕ್ಷುಲ್ಲಕ ಕಾರಣಗಳನ್ನು ನೀಡಿಕೊಂಡು ಒಂದು ಸಮುದಾಯದವರ ಹೆಸರುಗಳನ್ನು ಮಾತ್ರ ಕೈಬಿಡುವ ಪ್ರಯತ್ನದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದ್ದು, ನಕಲಿ ದೂರು ನೀಡಿದ ಬಿಜೆಪಿ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಶ್ರಫ್ ಆಗ್ರಹಿಸಿದರು.









Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News