Shiribagilu | ಯಕ್ಷಗಾನದ ಉಳಿವಿಗೆ ಸಮರ್ಥ ಸಂಘಟಕರ ನಿರ್ಮಾಣ ಅಗತ್ಯ: ಭುಜಬಲಿ ಧರ್ಮಸ್ಥಳ
‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ವಿಷಯದ ಕುರಿತು ವಿಶೇಷ ಚಿಂತನ-ಮಂಥನ ಕಾರ್ಯಕ್ರಮ
ಸಿರಿಬಾಗಿಲು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಶೀರ್ಷಿಕೆಯಡಿ ‘ಸಂಘಟನೆಯ ಸವಾಲುಗಳು – ಸಂಘಟಕ, ಕಲಾವಿದ, ಪ್ರೇಕ್ಷಕ, ಪೋಷಕ ಸಮಭಾಗಿಗಳು’ ವಿಷಯದ ಕುರಿತು ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹಿರಿಯ ಸಂಘಟಕ ಭುಜಬಲಿ ಧರ್ಮಸ್ಥಳ ಅಧ್ಯಕ್ಷತೆ ವಹಿಸಿ, ಸಂಘಟಕರಲ್ಲಿ ಪಾರದರ್ಶಕತೆ, ಕರ್ತವ್ಯಪ್ರಜ್ಞೆ ಹಾಗೂ ಕಲಾನಿಷ್ಠೆ ಇದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನದ ಸಂಘಟನೆ ಮತ್ತು ಕಲೆಯ ಬೆಳವಣಿಗೆಯ ವಿವಿಧ ಆಯಾಮಗಳನ್ನು ವಿವರಿಸಿದರು.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಅಶೋಕ ಭಟ್ ಉಜಿರೆ, ಸಂಘಟಕರು ಪ್ರಾಯೋಜಕರ ವಿಶ್ವಾಸ ಗಳಿಸುವುದರ ಜೊತೆಗೆ ಸ್ಥಳೀಯರು, ಯುವ ಕಲಾವಿದರು ಹಾಗೂ ಮಹಿಳೆಯರನ್ನು ಸಂಘಟನೆಯೊಂದಿಗೆ ಸೇರಿಸಿಕೊಂಡು ಹೊಸ ತಲೆಮಾರನ್ನು ಯಕ್ಷಗಾನದತ್ತ ಸೆಳೆಯಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಹಾಗೂ ಎಂ. ಶಾಂತಾರಾಮ ಕುಡ್ವ ಭಾಗವಹಿಸಿದ್ದರು.
ಗೋಷ್ಠಿಯ ಸಮನ್ವಯಕರಾದ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಮಾತನಾಡಿ, “ಯಕ್ಷಗಾನದ ಭವಿಷ್ಯವನ್ನು ಉತ್ತಮ ಕಲಾವಿದರಷ್ಟೇ ಅಲ್ಲ, ಸಮರ್ಥ ಸಂಘಟಕರೂ ನಿರ್ಧರಿಸುತ್ತಾರೆ. ವರ್ಷಪೂರ್ತಿ ತರಬೇತಿ, ಸಂಶೋಧನೆ, ಸಂವಾದ, ಯುವಜನರ ತೊಡಗಿಸಿಕೊಳ್ಳುವಿಕೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಪಾರದರ್ಶಕ ಆಡಳಿತದ ಮೂಲಕ ಸಂಘಟನೆಗಳು ಸಮಾಜದ ವಿಶ್ವಾಸ ಗಳಿಸಬೇಕು. ಹೊಸ ಕಲಾವಿದರು ಮತ್ತು ಸಂಘಟಕರನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಂಡಾಗ ಮಾತ್ರ ಯಕ್ಷಗಾನದ ಸುವರ್ಣಯುಗ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಭಟ್ ಕೊಂಕಣಾಜೆ, ಜನಾರ್ಧನ ಅಮ್ಮುಂಜೆ, ಗಣೇಶ್ ಪಾಲೆಚಾರ್, ವಿನಯ ಆಚಾರ್ ಹೊಸಬೆಟ್ಟು, ಸುಬ್ರಹ್ಮಣ್ಯ ಬೈಪಡಿತ್ತಾಯ, ದಿವಾಕರ ಆಚಾರ್ಯ, ಸದಾಶಿವ ನೆಲ್ಲಿಮಾರು, ವಸಂತ ಮಾಸ್ಟರ್ ಬಾಯಾರು, ಜಯರಾಮ ದೇವಸ್ಯ, ಕುಮಾರ ಶಂಕರ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ಜಯಲಕ್ಷ್ಮಿ ಆರ್. ಹೊಳ್ಳ, ಗಣೇಶ್ ನಾವಡ, ನಾರಾಯಣ ತುಂಗ, ಪೆರುವಡಿ ಸುಬ್ರಹ್ಮಣ್ಯ ಭಟ್, ಜಯಲಕ್ಷ್ಮಿ ಕಾರಂತ, ರಾಜಾರಾಮ ಹೊಳ್ಳ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರಮೇಶ್ ಕೆ.ವಿ., ಪ್ರೊ. ಶ್ರೀನಾಥ್ ಕಾಸರಗೋಡು, ಜಗದೀಶ ಕೂಡ್ಲು, ಅನುಪಮಾ ರಾಘವೇಂದ್ರ ಭಟ್ ಸೇರಿದಂತೆ ಹಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಹಾಗೂ ಸುಮಿತ್ರಾ ಮಯ್ಯ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.