×
Ad

'ಕಂದೀಲು' ಅತ್ಯುತ್ತಮ ಕನ್ನಡ ಸಿನಿಮಾ; ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ

Update: 2025-09-23 23:25 IST

 ಮಡಿಕೇರಿ, ಸೆ.23: ಸ್ವಸ್ತಿಕ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿತವಾದ ‘ಕಂದೀಲು’ ಕನ್ನಡ ಚಲನಚಿತ್ರಕ್ಕೆ ಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ರಾಷ್ಟ್ರಪತಿಯಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದರು.

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಯದಲ್ಲಿ 13 ಪ್ರಾದೇಶಿಕ ಭಾಷೆಗಳಲ್ಲಿನ 13 ಸಿನೆಮಾಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಯಿತು.

‘ಕಂದೀಲು’ ಚಿತ್ರ ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನೆಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಇದು ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ಅವರ ಸಾಧನೆಯಾಗಿದೆ. ‘ಕಂದೀಲು’ ಚಿತ್ರವು ಗ್ರಾಮೀಣ ಪ್ರದೇಶದಲ್ಲಿ ರೈತನ ಮತ್ತು ಅವರ ಕುಟುಂಬದ ಜೀವನವನ್ನು ಚಿತ್ರಿಸುತ್ತದೆ.

ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ಹಾಗೂ ಪತಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿ, ಚಿತ್ರತಂಡ ಮತ್ತು ಕಲಾವಿದರ ಸಹಕಾರದಿಂದ ಈ ಪ್ರಶಸ್ತಿ ಗಳಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

‘ಕಂದೀಲು’ ಚಿತ್ರವು ಕೊಲ್ಕತ್ತಾ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ ಹಿನ್ನಲೆಯಲ್ಲಿ, 15ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಈ ಚಿತ್ರವು ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಜನರ ಮೆಚ್ಚುಗೆ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News