ವಿರಾಜಪೇಟೆ | ನಾಲ್ವರನ್ನು ಹತ್ಯೆಗೈದ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ
ಮಡಿಕೇರಿ: ಪತ್ನಿ, ಮಲ ಮಗಳು, ಪತ್ನಿಯ ಅಜ್ಜ ಹಾಗೂ ಅಜ್ಜಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದ ವ್ಯಕ್ತಿಗೆ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಮಾ.27ರ ರಾತ್ರಿ ನಾಲ್ವರ ಹತ್ಯೆ ನಡೆದಿತ್ತು. ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಕೇರಳ ಮೂಲದ ಗಿರೀಶ್ (35) ಎಂಬಾತ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ಗಿರೀಶ್‌ನ ಭೀಕರ ಕೃತ್ಯಕ್ಕೆ ಪತ್ನಿ ನಾಗಿ(30), ಮಲ ಮಗಳು ಕಾವೇರಿ(5) ಪತ್ನಿಯ ಅಜ್ಜ ಜೇನು ಕುರುಬರ ಕರಿಯ(75) ಹಾಗೂ ಅಜ್ಜಿ ಗೌರಿ(70) ಹತ್ಯೆಗೀಡಾಗಿದ್ದರು.
ನಾಗಿ ಎಂಬಾಕೆ ಮೊದಲ ಪತಿಯನ್ನು ತೊರೆದು 2024ರಲ್ಲಿ ಕೇರಳ ಮೂಲದ ಗಿರೀಶ್ ಎಂಬಾತನ ಜೊತೆ ವಿವಾಹವಾಗಿದ್ದಳು. ಗಿರೀಶ್ ಕೂಡ ವಿವಾಹಿತನಾಗಿದ್ದು, ಪತ್ನಿಯನ್ನು ತೊರೆದು ನಾಗಿಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ನಾಗಿ ಮೊದಲ ಪತಿಗೆ ಜನಿಸಿದ್ದ ಕಾವೇರಿಯೊಂದಿಗೆ ಬೇಗೂರಿನಲ್ಲಿದ್ದ ಅಜ್ಜ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. 2ನೇ ಪತಿ ಗಿರೀಶ್ ನಾಗಿ ಇದ್ದ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.
2025ರ ಮಾರ್ಚ್ 27ರಂದು ರಾತ್ರಿ ಬಂದ ಗಿರೀಶ್ ಪತ್ನಿ ನಾಗಿಯ ಶೀಲ ಶಂಕಿಸಿ ಜಗಳವಾಡಿದ್ದಾನೆ. ಅಲ್ಲದೆ ಕತ್ತಿಯಿಂದ ಕಡಿದು ಮೊದಲು ನಾಗಿಯನ್ನು ಹತ್ಯೆ ಮಾಡಿದ್ದಾನೆ. ಈ ವೇಳೆ ನಾಗಿಯ ಕಂಕುಳಲ್ಲಿದ್ದ ಮಗು ಕಾವೇರಿಯ ತಲೆಯ ಭಾಗಕ್ಕೆ ಕತ್ತಿ ಏಟು ತಗಲಿ ಆಕೆಯೂ ಸ್ಥಳದಲ್ಲೇ ಮೃತಪಟ್ಟಳು ಎಂದು ಹೇಳಲಾಗಿದೆ. ಜಗಳವನ್ನು ಬಿಡಿಸಲು ಬಂದ ಅಜ್ಜ ಕರಿಯ ಹಾಗೂ ಅಜ್ಜಿ ಗೌರಿ ಕೂಡ ಕತ್ತಿಯಿಂದ ಹಲ್ಲೆಗೊಳಗಾಗಿ ಮೃತಪಟ್ಟರು ಎಂದು ದೂರು ದಾಖಲಾಗಿತ್ತು.
ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಂದಿನ ಅಡಿಷನಲ್ ಎಸ್ಪಿ ಸುಂದರ್ ರಾಜ್, ಪೊನ್ನಂಪೇಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಾಲ್ವರನ್ನು ಭೀಕರವಾಗಿ ಹತ್ಯೆಗೈದು ಕೇರಳದಲ್ಲ್ ತಲೆಮರೆಸಿಕೊಂಡಿದ್ದ. ಗಿರೀಶ್‌ನನ್ನು ಕೊಡಗು ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಕೊಲೆ ಪ್ರಕರಣದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊನ್ನಂಪೇಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು. ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ನಟರಾಜ ಅವರು ಕಲಂ 103(1), 238 ಬಿಎನ್‌ಎಸ್ ಅಡಿಯಲ್ಲಿ ಆರೋಪಿ ಗಿರೀಶ್ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಕುರಿತು ಸರಕಾರಿ ಅಭಿಯೋಜಕ ಯಾಸೀನ್ ಅಹ್ಮದ್ ಅವರು ಸರಕಾರದ ಪರವಾಗಿ ವಾದ ಮಂಡಿಸಿದರು.