×
Ad

ಶನಿವಾರಸಂತೆ : ಮೀಲಾದುನ್ನಬಿ ಪ್ರಯುಕ್ತ ಮದೀನಾ ಯೂತ್ ಬಾಯ್ಸ್ ವತಿಯಿಂದ ಶ್ರಮದಾನ

Update: 2025-09-10 11:25 IST

ಕೊಡಗು: ಶನಿವಾರಸಂತೆ ಮದೀನಾ ಯೂತ್ ಬಾಯ್ಸ್ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ.) ರವರ 1500 ನೇ ಜನ್ಮ ದಿನಾಚರಣೆ ಪ್ರಯುಕ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ "ಫ್ರೆಶ್ ವಿಲೇಜ್” ಸ್ವಚ್ಛತಾ ಕಾರ್ಯಕ್ರಮದಡಿ ಶ್ರಮದಾನ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮದೀನಾ ಯೂತ್ ಬಾಯ್ಸ್ ಸಂಘದ ಅಧ್ಯಕ್ಷ ಹಾಗೂ ಕೆ.ಜೆ.ಆರ್. ಉಸ್ತಾದ್ ಹಸೈನಾರ್ ಕಾಜೂರು ಅವರ ನೇತೃತ್ವದಲ್ಲಿ ಬೆಳಿಗ್ಗೆ ಬಾಪೂಜಿ ವೃತ್ತದಿಂದ ಹೊರಟ ಸಂಘದ ಸದಸ್ಯರು ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊಲೀಸ್ ಠಾಣೆ, ಸಾರ್ವಜನಿಕ ಗ್ರಂಥಾಲಯ, ಮದ್ಯಪೇಟೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಮಾಡಿ ಸ್ವಚ್ಛಗೊಳಿಸಿದರು.

ಸಂಘದ ಸದಸ್ಯರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹೊರ ಆವರಣ ಹಾಗೂ ಒಳಾಂಗಣವನ್ನು ಸ್ವಚ್ಛಗೊಳಿಸಿದ ನಂತರ ಮುಖ್ಯಶಿಕ್ಷಕಿ ಜೆಸಿಂತಾ ಸಿಕ್ವೆರಾ ಮಾತನಾಡಿ, ಸರ್ಕಾರಿ ಶಾಲೆ ಸರ್ವಧರ್ಮ ಸಮನ್ವಯವನ್ನು ಸಾರುತ್ತದೆ. ಶಾಲೆಗೆ ಬರುವ ಅನುದಾನ ಕಡಿಮೆ. ಆ ಹಣದಿಂದ ಸ್ವಚ್ಛತೆ ಸಾಧ್ಯವಿಲ್ಲ. ಮದೀನಾ ಯೂತ್ ಬಾಯ್ಸ್ ಸದಸ್ಯರು ನಿಸ್ವಾರ್ಥ ಮನೋಭಾವದಿಂದ ಶಾಲೆಯನ್ನು ಸ್ವಚ್ಛಗೊಳಿಸಿ ಬೆಳಕು ನೀಡಿದ್ದಾರೆ. ಈ ಸಂಘ ಇತರ ಸಂಘಟನೆಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು.

`ಸಂಘದ ಅಧ್ಯಕ್ಷ ಉಸ್ತಾದ್ ಹಸೈನಾರ್ ಮಾತನಾಡಿ, ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವ ಉದ್ದೇಶದಿಂದ ಮದೀನಾ ಯೂತ್ ಬಾಯ್ಸ್ ಸಂಘಟನೆ ರಚಿಸಿಕೊಂಡು ಈದ್ ಮಿಲಾದ್ ಪ್ರಯುಕ್ತ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿದೆ. ಹಿಂದೂ ಯುವಕರು ಸಹ ಜತೆಗೂಡಿದ್ದಾರೆ. ಮುಂದೆಯೂ ಈ ಸಂಘಟನೆ ಸಮಾಜದ ಯಾವುದೇ ಉತ್ತಮ ಕಾರ್ಯಕ್ಕೆ ಕೈಜೋಡಿಸುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಸುಜ್ಜಾದ್ ಭಯ್ಯಾ, ಪದಾಧಿಕಾರಿಗಳಾದ ಜಾಫರ್, ಮುನಾಫ್, ಮುಹೀದ್, ಶಾಹೀದ್, ರಬ್ಬಾನಿ, ಇಬ್ರಾಹಿಂ, ತಸ್ಲಿಂ ಮಾಮು, ಶಮೀರ್ ಅಳಿಯಾಕ, ಭಾವಕ, ಬಾಬಣ್ಣ, ರಫೀಕ್ ದುಬೈ, ಅಶ್ರಫ್, ದಸ್ತು, ತಸ್ವೀರ್ ಮತ್ತಿತರ ಸದಸ್ಯರು ಇಡೀ ದಿನದ ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News