ಕೊಡಗು | 9 ತಿಂಗಳಲ್ಲಿ 30 ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು ಪತ್ತೆ !
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ 2024ರ ಎಪ್ರಿಲ್‌ನಿಂದ 2024ರ ಡಿಸೆಂಬರ್‌ವರೆಗೆ ಪೊಕ್ಸೊ ಕಾಯ್ದೆಯಡಿ ದಾಖಲಾದ 59 ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ 30 ಬಾಲಕಿಯರು ಗರ್ಭಿಣಿಯಾಗಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಪೊಕ್ಸೊ ಕಾಯ್ದೆಯಡಿ ಗರ್ಭಿಣಿಯಾಗಿರುವ 30 ಪ್ರಕರಣಗಳಲ್ಲಿ 14 ಅಪ್ರಾಪ್ತೆಯರ ಹೆರಿಗೆಯೂ ಆಗಿದ್ದು, ಇದುವರೆಗೆ ಯಾವುದೇ ಮಕ್ಕಳನ್ನು ಸರಕಾರಕ್ಕೆ ಒಪ್ಪಿಸಿಲ್ಲ. ಒಂದು ಪ್ರಕರಣವನ್ನು ಗರ್ಭಪಾತ ಮಾಡಿಸಲಾಗಿದೆ. ಪ್ರಸಕ್ತ 15 ಅಪ್ರಾಪ್ತೆಯರು ಗರ್ಭಿಣಿಗಳಾಗಿದ್ದಾರೆ.
ಪೊಕ್ಸೊ ಕಾಯ್ದೆಯಡಿ ದಾಖಲಾದ 59 ಪ್ರಕರಣಗಳಲ್ಲಿ 10 ಪ್ರಕರಣಗಳು ತನಿಖಾ ಹಂತದಲ್ಲಿದೆ. ೪೮ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ದಾಖಲಾಗಿದ್ದ ಒಂದು ಪ್ರಕರಣವು ಖುಲಾಸೆಯಾಗಿದೆ. ಇದುವರೆಗೆ ದಾಖಲಾದ ಪ್ರಕರಣಗಳಲ್ಲಿ ತನಿಖಾ ಹಂತ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ.
ಮಡಿಕೇರಿ ತಾಲೂಕಿನಲ್ಲಿ 8, ವೀರಾಜಪೇಟೆ 16, ಪೊನ್ನಂಪೇಟೆ 15, ಸೋಮವಾರಪೇಟೆ 8 ಹಾಗೂ ಕುಶಾಲನಗರದಲ್ಲಿ 12 ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಪ್ರಕರಣಗಳು ದಾಖಲಾಗಿದೆ.
ತೋಟದ ಲೈನ್‌ಮನೆಗಳೇ ಹಾಟ್‌ಸ್ಪಾಟ್: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೋಟದ ಲೈನ್ ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, 24 ಪ್ರಕರಣಗಳು ತೋಟದ ಲೈನ್‌ಮನೆಗಳಲ್ಲಿ ನಡೆದಿವೆ. ಇದರಲ್ಲಿ ಪೊನ್ನಂಪೇಟೆಯಲ್ಲಿ 10 ಮತ್ತು ವೀರಾಜಪೇಟೆ ತಾಲೂಕಿನಲ್ಲಿ 7 ಪ್ರಕರಣ ದಾಖಲಾಗಿದೆ.
ತೋಟದ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಕ್ಸೊ ಪ್ರಕರಣಗಳು ದಾಖಲಾಗುತ್ತಿದೆ.
ತೋಟದ ಲೈನ್‌ಮನೆಗಳಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿವೆ. ಬಾಕಿ ಉಳಿದ ಪ್ರಕರಣಗಳು ತೋಟಕ್ಕೆ ಸೀಮಿತಗೊಂಡು ಹೊರ ಜಗತ್ತಿಗೆ ತಿಳಿಯುತ್ತಿಲ್ಲ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದರೂ ತೋಟದ ಮಾಲಕರ ಮಧ್ಯಸ್ಥಿಕೆಯಲ್ಲಿ ರಾಜಿಗೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಬಂದರೆ ಅದನ್ನು ಪರಿಶೀಲಿಸಲು ತೋಟದ ಲೈನ್ ಮನೆಗಳಿಗೆ ತೆರಳಿದರೆ ತೋಟದ ಮಾಲಕರೇ ಕೆಲವೊಮ್ಮೆ ಲೈನ್ ಮನೆಯಲ್ಲಿ ವಾಸಿಸುವವರಿಗೆ ರಕ್ಷಾ ಕವಚವಾಗಿ ನಿಲ್ಲುತ್ತಾರೆ. ಪೊಲೀಸರಿಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಲೈನ್ ಮನೆಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ತೋಟದ ಮಾಲಕರು ಅಪರಾಧಿಗಳನ್ನು ಪತ್ತೆ ಹಚ್ಚಲು ಸಹಕಾರ ನೀಡಿದರೆ, ಇನ್ನೂ ಕೆಲವು ಮಾಲಕರು ಇಲಾಖೆಯೊಂದಿಗೆ ಸಹಕಾರವೇ ನೀಡುವುದಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ಹೇಳುತ್ತಾರೆ.
ತೋಟದ ಲೈನ್‌ಮನೆಗಳಲ್ಲಿ ವಾಸಿಸುವವರು ಕೆಲವೊಂದು ಭಾಗಗಳಲ್ಲಿ ವರ್ಷದಿಂದ ವರ್ಷಕ್ಕೆ ಕೆಲಸಕ್ಕಾಗಿ ತೋಟವನ್ನು ಬದಲಾಯಿಸುವುದು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಕಾರ್ಮಿಕರು ಇರುವುದರಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಪತ್ತೆ ಹಚ್ಚಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ವೀರಾಜಪೇಟೆ ಮತ್ತು ಪೊನ್ನಂಪೇಟೆ ಭಾಗದಲ್ಲಿನ ತೋಟದ ಲೈನ್ ಮನೆಗಳಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭ ಧರಿಸಿದರೆ ಇಲಾಖೆಯೊಂದಿಗೆ ಮಾಹಿತಿ ನೀಡಿ ತೋಟದ ಮಾಲಕರು ಸಹಕರಿಸಬೇಕಾಗಿದೆ ಎನ್ನುತ್ತಾರೆ ಅಧಿಕಾರಿ.
ಬದಲಾಗುತ್ತಿರುವ ಹಾಡಿಗಳು :
ಕೊಡಗಿನಲ್ಲಿ ಈ ಹಿಂದೆ ಅತೀ ಹೆಚ್ಚು ಪೊಕ್ಸೊ ಪ್ರಕರಣಗಳು ಹಾಡಿಗಳಲ್ಲಿ ದಾಖಲಾಗುತ್ತಿತ್ತು. ಆದರೆ, ಇದೀಗ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯು ಸತತವಾಗಿ ಜಾಗೃತಿ ಮೂಡಿಸುತ್ತಿರುವುದರಿಂದ ಹಾಡಿಗಳಲ್ಲಿ ಪೊಕ್ಸೊ ಪ್ರಕರಣಗಳು ದಾಖಲಾಗುತ್ತಿಲ್ಲ.
ಕಳೆದ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಹಾಡಿಗಳಲ್ಲಿ ಕೇವಲ ೩ ಪ್ರಕರಣಗಳು ದಾಖಲಾಗಿವೆ. ಹಾಡಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಹಾಗೂ ಹಾಡಿಗಳಲ್ಲಿನ ಜನರು ಹೆಚ್ಚಾಗಿ ಸಮಾಜದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದರಿಂದ ಪೊಕ್ಸೊ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಹಾಡಿಯಲ್ಲಿ ಪೊಕ್ಸೊ ಪ್ರಕರಣಗಳ ಸಂಖ್ಯೆ ಶೂನ್ಯಕ್ಕಿಳಿಯಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೆಲಸಕ್ಕಾಗಿ ತೋಟದ ಮನೆಗಳಲ್ಲಿ ವಾಸ ಮಾಡಿ ನಂತರ ಬೇರೆ ಕಡೆ ಹೋಗುತ್ತಿರುವುದರಿಂದ ಕಾರ್ಮಿಕರನ್ನು ಹೆಚ್ಚಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಲೈನ್ ಮನೆಗಳಿಗೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಹೆಚ್ಚಾಗಿ ಲೈನ್ ಮನೆಗಳಲ್ಲಿ ದಾಖಲಾಗುತ್ತಿರುವ ಪೊಕ್ಸೊ ಪ್ರಕರಣಗಳನ್ನು ಕಡಿಮೆಗೊಳಿಸಲು ವಿಶೇಷ ಕಾರ್ಯಕ್ರಮ ರೂಪಿಸಲು ಸಿದ್ಧತೆ ನಡೆಸುತ್ತಿದ್ದೇವೆ. ತೋಟದ ಲೈನ್‌ಮನೆಗಳಲ್ಲಿ ವಾಸಿ ಸುತ್ತಿರುವ ಪೋಷಕರು ಹೆಚ್ಚಾಗಿ ಮದ್ಯಪಾನಕ್ಕೆ ದಾಸರಾಗಿ, ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದ ತೋಟದ ಲೈನ್ ಮನೆಗಳಲ್ಲಿ ಪೊಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದೆ.
-ಈರಸ್ವಾಮಿ ಬಿ., ಕೊಡಗು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಜಾತಿವಾರು ಮಾಹಿತಿ :
ಪರಿಶಿಷ್ಟ ಜಾತಿ: 11
ಪರಿಶಿಷ್ಟ ಪಂಗಡ: 32
ಇತರ: 16
ಐದು ಬಾಲ್ಯವಿವಾಹ ಪ್ರಕರಣ ದಾಖಲು
ಕೊಡಗಿನಲ್ಲಿ 2024ರ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಐದು ಬಾಲ್ಯ ವಿವಾಹಗಳು ನಡೆದಿದೆ. ಬಾಲ್ಯ ವಿವಾಹದ ಬಗ್ಗೆ ಇಲಾಖೆಗೆ 15 ದೂರುಗಳು ಬಂದಿತ್ತು. ಇದರಲ್ಲಿ 9 ದೂರುಗಳು ತಪ್ಪು ಮಾಹಿತಿಯಾಗಿದ್ದು, ಒಂದು ಬಾಲ್ಯವಿವಾಹವನ್ನು ತಡೆಗಟ್ಟಲಾಗಿದೆ. ಮಡಿಕೇರಿಯಲ್ಲಿ 2, ಸೋಮವಾರಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕಿನಲ್ಲಿ ತಲಾ 1 ಬಾಲ್ಯವಿವಾಹ ಪ್ರಕರಣ ದಾಖಲಾಗಿದ್ದು, ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಹಾಗೂ ಪೋಷಕರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಸಂಬಂಧಿಸಿದ ಇಲಾಖೆ ಮಾಹಿತಿ ನೀಡಿದೆ.
ದಾಖಲಾದ ಪ್ರಕರಣಗಳು :
ಲೈನ್‌ಮನೆಗಳು: 24
ಹಾಡಿ: 3
ಸ್ವಂತ-ಬಾಡಿಗೆ ಮನೆಗಳು: 32
ಪೊಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣ :
(2024ರ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ)
ತಾಲೂಕುವಾರು ದೌರ್ಜನ್ಯಕ್ಕೊಳಗಾದ ಮಕ್ಕಳ ಸಂಖ್ಯೆ :
ಮಡಿಕೇರಿ: 8
ವೀರಾಜಪೇಟೆ: 16
ಪೊನ್ನಂಪೇಟೆ: 15
ಸೋಮವಾರಪೇಟೆ: 8
ಕುಶಾಲನಗರ: 12
ಒಟ್ಟು: 59