Madikeri | ಕಾಡು ಕೋಣ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಜೀಪಿನ ಮೇಲೆ ಗುಂಡಿನ ದಾಳಿ; ಇಬ್ಬರು ಆರೋಪಿಗಳಿಗೆ ಗಾಯ
266 ಕೆಜಿ ಮಾಂಸ, ವಾಹನ ವಶ
ಮಡಿಕೇರಿ: ಸಂಪಾಜೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಕೋಣ ಬೇಟೆಯಾಡಿ ಅದರ ಮಾಂಸ ಸಾಗಿಸುತ್ತಿದ್ದ ಜೀಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಸಂದರ್ಭ ಜೀಪಿನಲ್ಲಿದ್ದ ಇಬ್ಬರು ಆರೋಪಿಗಳು ಗಾಯಗೊಂಡ ಘಟನೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ.
ನಾಪೊಕ್ಲು ಸಮೀಪದ ಕೊಳಕೇರಿ ಗ್ರಾಮದ ಯಾಕೂಬ್ ಹಾಗೂ ಜುಬೇರ್ ಗಾಯಗೊಂಡ ಆರೋಪಿಗಳಾಗಿದ್ದಾರೆ. ಜೀಪನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಸಂದರ್ಭ 266 ಕೆಜಿ ಕಾಡು ಕೋಣದ ಮಾಂಸ, ಕತ್ತಿ, 4 ಜೀವಂತ ಕಾಡತೂಸು ಮತ್ತು ಚಾಕುಗಳು ಪತ್ತೆಯಾಗಿವೆ.
ಸಂಪಾಜೆ ವ್ಯಾಪ್ತಿಯಲ್ಲಿ ವನ್ಯಜೀವಿಯನ್ನು ಹತ್ಯೆ ಮಾಡಿ ಅದರ ಮಾಂಸವನ್ನು ವಾಹನದಲ್ಲಿ ಸಾಗಿಸುತ್ತಿರುವ ಬಗ್ಗೆ ಗುರುವಾರ ರಾತ್ರಿ ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ-ಬೆಟ್ಟತ್ತೂರು ರಸ್ತೆಯ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ರಾತ್ರಿ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾದು ಕುಳಿತಿದ್ದರು. ಈ ಸಂದರ್ಭ ಜೀಪು ಆಗಮಿಸಿದ್ದು, ಅರಣ್ಯ ಸಿಬ್ಬಂದಿ ಜೀಪನ್ನು ತಡೆಯುವ ಪ್ರಯತ್ನ ನಡೆಸಿದ್ದರು.
ಈ ವೇಳೆ ಅರಣ್ಯ ಸಿಬ್ಬಂದಿಯ ಮೇಲೆ ಜೀಪನ್ನು ಹರಿಸುವ ಪ್ರಯತ್ನ ನಡೆದಿದ್ದು, ಈ ವೇಳೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಗುಂಡು ಜೀಪಿಗೆ ತಗಲಿದ್ದು, ವಾಹನದಲ್ಲಿದ್ದ ಕೊಳಕೇರಿ ಗ್ರಾಮದ ಯಾಕೂಬ್ ಮತ್ತು ಜುಬೇರ್ ಗಾಯಗೊಂಡಿದ್ದಾರೆ ಎಂದು ಮಡಿಕೇರಿ ವಿಭಾಗದ ಡಿಸಿಎಫ್ ಅಭಿಷೇಕ್ ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಗಾಬರಿಯಾಗಿ ಪಕ್ಕದಲ್ಲಿದ್ದ ಕಾಫಿ ತೋಟಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕತ್ತಲೆಯಲ್ಲಿ ಹುಡುಕಾಟ ನಡೆಸಿದರೂ ಆರೋಪಿಗಳು ಪತ್ತೆಯಾಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಜೀಪನ್ನು ವಶಕ್ಕೆ ಪಡೆದು ಅರಣ್ಯ ಕಚೇರಿಗೆ ಸ್ಥಳಾಂತರಿಸಿ ಪರಿಶೀಲಿಸಿದ ಸಂದರ್ಭ ಕಾಡುಕೋಣದ ಮಾಂಸ, ಜೀವಂತ ಕಾಡತೂಸುಗಳು, ಮಾಂಸ ಮಾಡಲು ಬಳಸಿದ್ದ ಕತ್ತಿ, ಚಾಕುಗಳು ಪತ್ತೆಯಾಗಿವೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪ:
ಅರಣ್ಯ ಸಿಬ್ಬಂದಿ ತಡೆದಾಗ ತಿರುವಿನಲ್ಲಿ ತಕ್ಷಣ ಜೀಪ್ ಅನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಈ ಸಂದರ್ಭ ಗುಂಡು ಹಾರಿಸಲಾಗಿದೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.
ಆಸ್ಪತ್ರೆಗೆ ದಾಖಲು:
ಗುಂಡೇಟು ತಗಲಿದ ಇಬ್ಬರು ಆರೋಪಿಗಳು ತಮ್ಮ ಗೆಳೆಯರಿಗೆ ಮಾಹಿತಿ ನೀಡಿ ಬೇರೊಂದು ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇಬ್ಬರಿಗೂ ಬೆನ್ನು ಹಾಗೂ ತಲೆಯ ಭಾಗಕ್ಕೆ ಗುಂಡೇಟಿನ ಚಿಲ್ಲುಗಳು ತಗಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ವೈದ್ಯರ ಶಿಫಾರಸಿನಂತೆ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವನ್ಯಜೀವಿ ಮಾಂಸ ಸಾಗಾಟದ ಖಚಿತ ಮಾಹಿತಿ ಆಧರಿಸಿ ಪತ್ತೆಗೆ ಮುಂದಾದ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ವಾಹನ ಹರಿಸುವ ಪ್ರಯತ್ನ ನಡೆದಿದೆ. ಈ ವೇಳೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಕೆಲವು ಪೆಲ್ಲೆಟ್ಸ್‌ಗಳು ಜೀಪು ಮತ್ತು ಅದರಲ್ಲಿದ್ದ ವ್ಯಕ್ತಿಗಳಿಗೆ ತಗಲಿದೆ. ವಾಹನದಲ್ಲಿ ಕಾಡುಕೋಣ ಮಾಂಸ, ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅವರು ಬೇಟೆ ಮಾಡಿ ಮಾಂಸ ಸಾಗಿಸುತ್ತಿರುವುದು ಖಚಿತವಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.
-ಅಭಿಷೇಕ್, ಡಿಸಿಎಫ್ ಮಡಿಕೇರಿ