ಕೊಡಗು- ಕೇರಳ ಗಡಿಯ ದಟ್ಟ ಅರಣ್ಯದಲ್ಲಿ ಭಾರೀ ಪ್ರಮಾಣದ ಭೂ ಕುಸಿತ
ಮಡಿಕೇರಿ ಆ.1 : ವ್ಯಾಪಕ ಮಳೆಯಿಂದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಹರಡಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿರುವುದು ಬೆಳಕಿಗೆ ಬಂದಿದೆ.
ಕೆದಮುಳ್ಳೂರು ಪಂಚಾಯ್ತಿಗೆ ಒಳಪಟ್ಟ ಪಾಲಂಗಾಲ ಗ್ರಾಮದ ಮಲೆತಿರಿಕೆ ದೇವಸ್ಥಾನದಿಂದ ಸುಮಾರು 5 ರಿಂದ 10 ಕಿ.ಮೀ. ದೂರದಲ್ಲಿ ಕೇರಳದ ಗಡಿಗೆ ಒತ್ತಿಕೊಂಡಂತೆ ಅರಣ್ಯವಿದೆ. ಇದರ ನಡುವಿನ ಗುಡ್ಡ ಪ್ರದೇಶದಿಂದ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿದೆ. ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ರಾಜ್ಯದ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ಸುತ್ತಮುತ್ತಲ ಸುಮಾರು 10 ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಜನವಸತಿಯ ಪ್ರದೇಶಗಳಿಲ್ಲ. ಇದರಿಂದಾಗಿ ಗುಡ್ಡ ಕುಸಿತದ ಬಗ್ಗೆ ಯಾರ ಗಮನಕ್ಕೂ ಬರಲಿಲ್ಲ ಮತ್ತು ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಅರಣ್ಯದ ಗುಡ್ಡ ಪ್ರದೇಶದಲ್ಲಿ ಭಾರೀ ಗಾಳಿ ಮಳೆಯ ಸಂದರ್ಭ ಐದಾರು ಏಕರೆಯಷ್ಟು ಅರಣ್ಯ ಭಾಗ ಸಂಪೂರ್ಣ ಕುಸಿದಿದ್ದು, ಆ ಪ್ರದೇಶದಲ್ಲಿದ್ದ ಮರಗಿಡಗಳು ಸಂಪೂರ್ಣವಾಗಿ ನಾಶವಾಗಿದ್ದು, ಬೆಟ್ಟದ ಮೇಲ್ಭಾಗದಿಂದ ಸಣ್ಣ ನೀರಿನ ಹರಿವು ಕಂಡು ಬಂದಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು.
ಮತ್ತೆ ಭೂಕುಸಿತ
ಐದು ವರ್ಷಗಳ ಹಿಂದೆ ಕೆದಮುಳ್ಳೂರು ಬಳಿಯ ತೋರ ಗ್ರಾಮದಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿ ಜೀವ ಹಾನಿಯಾಗಿತ್ತು. ಈ ಘಟನೆಯ ಬಳಿಕ ಇದೀಗ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಪ್ರಸಕ್ತ ಸಾಲಿನಲ್ಲಿ ಹಿಂಗಾರು ಮತ್ತು ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಇದರಿಂದ ಅಂತರ್ಜಲದ ಒತ್ತಡ ಹೆಚ್ಚಿ ಇಂತಹ ಭೂ ಕುಸಿತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ತಜ್ಞರು ಹೆಚ್ಚಿನ ಅಧ್ಯಯನ ನಡೆಸಬೇಕಿದೆ.