×
Ad

ದೇಶದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿ : ಮಧ್ಯ ಪ್ರದೇಶ ಮೂಲದ ಇಬ್ಬರು ಆರೋಪಿಗಳ ಬಂಧನ

Update: 2025-08-19 23:34 IST

ಮಡಿಕೇರಿ, ಆ.19: ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಅಪರಾಧ ಕೃತ್ಯಗಳನ್ನು ನಡೆಸಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಪೊಲೀಸ್ ವಸತಿ ಗೃಹದಲ್ಲಿ ಇತ್ತೀಚೆಗೆ ನಡೆದ ಕಳವು ಪ್ರಕರಣದ ತನಿಖೆೆ ಕೈಗೊಂಡ ಪೊಲೀಸರಿಗೆ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ.

ಈ ಸಂಬಂಧ ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕಳೆದ ಎರಡು ತಿಂಗಳಿನಿಂದ ನೂರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದರು.

ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಾರ್ವಲ್ಲಿ ಗ್ರಾಮದ ಸುರೇಶ್ ಸೆಂಗಾರ್(23) ಹಾಗೂ ಮಾಲ್‌ಪುರ ಗ್ರಾಮದ ಮನೀಶ್ ಭಗೇಲ್ (27) ಎಂದು ಗುರುತಿಸಲಾಗಿದೆ.

ಸುರೇಶ್ ವಿರುದ್ಧ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ 25ಕ್ಕೂ ಹೆಚ್ಚಿನ ಅಪರಾಧ ಪ್ರಕರಣಗಳು ದಾಖಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಸೆರೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಪೊಲೀಸರ ಮನೆಯಲ್ಲೇ ಕಳ್ಳತನ!:

ಮಡಿಕೇರಿ ನಗರದ ಓಲ್ಡ್ ರೈಫಲ್ ರೇಂಜ್ ಪೊಲೀಸ್ ವಸತಿ ಗೃಹ ಸಮುಚ್ಛಯದಲ್ಲಿ ಜೂ.17ರಂದು ರಾತ್ರಿ ವೇಳೆ ಮನೆಗಳ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿತ್ತು. ಮೂರು ಮನೆಗಳಿಂದ 95 ಸಾವಿರ ರೂ. ನಗದು ಮತ್ತು 5.5 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.

ಈ ಕಳವು ಪ್ರಕರಣವನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಕಳವು ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಸಿಸಿ ಕ್ಯಾಮರಾಗಳ ಮಾಹಿತಿಯನ್ನು ಕಲೆಹಾಕಿ ತನಿಖೆ ನಡೆಸಲಾಯಿತು.

ಕೆರೆಯಲ್ಲಿ ಬೈಕ್ ಪತ್ತೆ:

ತನಿಖೆಯ ಹಂತದಲ್ಲಿ ಮಕ್ಕಂದೂರು ಬಳಿಯ ಕಾಂಡನಕೊಲ್ಲಿಯ ಕೆರೆಯಲ್ಲಿ ಮಹಾರಾಷ್ಟ್ರ ನೋಂದಣಿಯ ಬೈಕ್ ಪತ್ತೆಯಾಗಿತ್ತು. ಈ ಆರೋಪಿಗಳು ತಾವು ದುಷ್ಕೃತ್ಯವೆಸಗುವ ಸಂದರ್ಭಗಳಲ್ಲೆಲ್ಲ ಕಳವು ಮಾಡಿದ ಬೈಕ್‌ಗಳನ್ನೇ ಬಳಸುತ್ತಿದ್ದರು. ಕೆರೆಗೆ ಹಾಕಿದ್ದ ಬೈಕ್‌ನ್ನು ಗೋವಾದಿಂದ ಕದ್ದು ಇಲ್ಲಿಗೆ ತರಲಾಗಿತ್ತು. ಬಳಿಕ ಮತ್ತೊಂದು ಬೈಕ್ ಕಳವು ಮಾಡಿ ತೆರಳಿದ್ದರೆಂದು ತನಿಖೆಯ ಸಂದರ್ಭ ತಿಳಿದು ಬಂದಿದೆ.

500 ಸಿಸಿ ಕ್ಯಾಮರಾ ಪರಿಶೀಲನೆ:

ಆರೋಪಿಗಳ ಸುಳಿವಿನ ಜಾಡು ಹಿಡಿದ ಪೊಲೀಸರು ಕೊಡಗು, ಹಾಸನ, ಗೋವಾ ಮೊದಲಾದೆಡೆ ಸುಮಾರು 700 ಕಿ.ಮೀ. ವ್ಯಾಪ್ತಿಯ 500 ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆಗೆ ಒಳಪಡಿಸಿದರು. ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡ ಮಧ್ಯ ಪ್ರದೇಶದ ಧಾರ್ ಜಿಲ್ಲೆಗೆ ತೆರಳಿ ಅಲ್ಲಿನ ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತರಿಂದ 50,480 ರೂ. ನಗದು, 9 ಮೊಬೈಲ್ ಫೋನ್‌ಗಳು, ಒಂದು ಬೋಲ್ಟ್ ಕಟ್ಟರ್, ಒಂದು ಕಬ್ಬಿಣದ ರಾಡ್ ಮತ್ತು ಒಂದು ಬ್ಯಾಕ್ ಪ್ಯಾಕ್ ಬ್ಯಾಗ್‌ನ್ನು ವಶಪಡಿಸಿಕೊಂಡಿರುವುದಾಗಿ ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಡಿವೈಎಸ್ಪಿ ಸೂರಜ್, ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News