7ನೇ ಗ್ಯಾರಂಟಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು : ಸಿಎಂ ಡಿ.ಕೆ.ಶಿವಕುಮಾರ್
"2027ರ ವೇಳೆಗೆ ನೀರು ಹರಿಸಲು ಸರಕಾರದ ಸಂಕಲ್ಪ"
ಮಾಲೂರು: “ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ ಹಾಗೂ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡುತ್ತಿದೆ. ಇದರ ಮೂಲಕ 2027ರ ಅಂತ್ಯದ ವೇಳೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಲು ಸರಕಾರ ಸಂಕಲ್ಪ ಮಾಡಿದೆ” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿಯ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.
“ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಯಾವುದು ಸುಲಭವಾಗಿ ಸಿಗುವುದಿಲ್ಲ. ಈ ಯೋಜನೆ ಕಷ್ಟವಾಗಿದೆ. ಆದರೆ ಪ್ರಯತ್ನ ಮಾಡಬೇಕಲ್ಲವೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಲಾಗುವುದು. ತುಮಕೂರುವರೆಗೂ ನೀರು ತರುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ನಾವು ಕೆಸಿ ವ್ಯಾಲಿ ಯೋಜನೆ ಮೂಲಕ 104 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹೆಚ್.ಎನ್ ವ್ಯಾಲಿ 65 ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. 700ಕ್ಕೂ ಹೆಚ್ಚು ಕೆರೆಗಳಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸಲು ಮುಂದಾಗಿದ್ದೇವೆ. ಅಂತರ್ಜಲ ಹೆಚ್ಚಿಸಬೇಕು, ಕೆರೆಗಳಿಗೆ ಹಾಗೂ ರೈತರಿಗೆ ನೀರು ತಲುಪಬೇಕು. ಹೀಗಾಗಿ ಆಗಸ್ಟ್ 15ರಂದು ನಮ್ಮ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರಕಟಿಸಲಿದ್ದೇವೆ. ಜಲ ಜೀವಕ್ಕೆ ನೆಮ್ಮದಿ, ನೀರಿಲ್ಲದೆ ಬದುಕಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರ ನೀರಿನ ಸಮಸ್ಯೆಗೆ ವಿವಿಧ ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ತಿಳಿಸಿದರು.
“ಅಧಿಕಾರ ಶಕ್ತಿ ಸಂಕೇತವಲ್ಲ, ಜವಾಬ್ದಾರಿಯ ಸಂಕೇತ. ನಾವು ಅಧಿಕಾರವನ್ನು ಸಿಂಹಾಸನವೆಂದು ತಿಳಿದಿಲ್ಲ, ಜನಸೇವೆಗೆ ಸಿಕ್ಕಿರುವ ಅವಕಾಶ ಎಂದು ಭಾವಿಸಿದ್ದೇವೆ. ಮೂರ್ತಿಗೆ ಬೆಲೆ ಕಟ್ಟಬಹುದು, ದೇವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರು. ನಮಗೆ ಆಶೀರ್ವಾದ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು” ಎಂದು ತಿಳಿಸಿದರು.
ಆದರ್ಶ ಶಾಸಕ ನಂಜೇಗೌಡರು
“ನಂಜೇಗೌಡರು ರಾಜ್ಯಕ್ಕೆ ಆದರ್ಶ ಶಾಸಕರು. ಕೋವಿಡ್ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಇಲ್ಲದೇ ಇರುವಾಗ ನಾವು ಇಲ್ಲಿ ತರಕಾರಿ ಖರೀದಿ ಮಾಡಿ ಬೆಂಗಳೂರಿನಲ್ಲಿ ಜನರಿಗೆ ಉಚಿತವಾಗಿ ಹಂಚಿದ್ದೇವೆ. ನಂಜೇಗೌಡರು ನಿಮಗೆ ಮಾತು ಕೊಟ್ಟಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ. ನಂಜೇಗೌಡರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅದಕ್ಕೆ ಈ ಕಾರ್ಯಕ್ರಮ ಉದಾಹರಣೆ. ಅವರು ತಮಗೆ ಸಿಕ್ಕ ಅವಕಾಶದಲ್ಲಿ ಇಂತಹ ಯೋಜನೆಗಳ ಮೂಲಕ ಸಾಕ್ಷಿಗುಡ್ಡೆ ಬಿಟ್ಟಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡಲಿ, ನಮ್ಮ ತಪ್ಪು ಕಂಡು ಹಿಡಿದರೆ ತಿದ್ದುಕೊಳ್ಳೋಣ. ಆದರೆ ಕಳೆದ ಮೂರು ವರ್ಷಗಳಲ್ಲಿ ವಿರೋಧ ಪಕ್ಷಗಳ ಟೀಕಗಳು ಸತ್ತಿವೆ, ನಮ್ಮ ಸಾಧನೆಗಳು ಶಾಶ್ವತವಾಗಿ ಉಳಿದಿವೆ” ಎಂದು ತಿಳಿಸಿದರು.
ಮತದಾನದ ಹಕ್ಕು ಉಳಿಸಿಕೊಳ್ಳಿ
“ನನ್ನದು ಹೊಸ ಸರ್ಕಾರ ಅಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ 3 ವರ್ಷ ನಡೆದ ಸರ್ಕಾರದ ಮುಂದುವರಿದ ಭಾಗ. ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆ. ನೀವು ನಿಮ್ಮ ಮತ ಉಳಿಸಿಕೊಳ್ಳದಿದ್ದರೆ, ನೀವು ಅನೇಕ ಯೋಜನೆಗಳಿಂದ ವಂಚಿತರಾಗುತ್ತೀರಿ. ನಿಮ್ಮ ಮತ ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ. ಕರಡುಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಹೆಸರು ತೆಗೆಯಲಾಗುತ್ತಿದೆ. ನಿಮ್ಮ ಜಾತಿ ಪ್ರಮಾಣಪತ್ರ, ವಾಸ ದೃಢೀಕರಣ ಪತ್ರ ನೀಡಲು ಸರಕಾರ ಮುಂದಾಗಿದೆ. ಸರಕಾರ ಚುನಾವಣಾ ಆಯೋಗದ ಜತೆ ಕೈಜೋಡಿಸಲಿದೆ” ಎಂದು ಹೇಳಿದರು.