ಅಧಿವೇಶನದೊಳಗೆ ಖಾತೆ ಹಂಚಿಕೆ, ಬಳಿಕ ಸಚಿವ ಸ್ಥಾನ ತುಂಬಲಾಗುತ್ತದೆ : ಸಿಎಂ ಡಿ.ಕೆ.ಶಿವಕುಮಾರ್
ಮಾಲೂರು (ಕೋಲಾರ) : ಹೊಸದಿಲ್ಲಿಯಲ್ಲಿ ವರಿಷ್ಠರೊಂದಿಗೆ ಹಲವು ವಿಚಾರಗಳನ್ನು ಚರ್ಚಿಸಿ ಬಂದಿದ್ದೇನೆ. ಅಧಿವೇಶನದೊಳಗೆ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಅಧಿವೇಶನ ಬಳಿಕ ಉಳಿದ ಸಚಿವ ಸ್ಥಾನದ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಲೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಧನಾ ಸಂಭ್ರಮ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜೆಡಿಎಸ್ ಪಕ್ಷದ ಬಿಡದಿ ಟೌನ್ ಶಿಪ್ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ರಾಜಕೀಯದ ಉಳಿವಿಗಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ನೈಸ್ ಮತ್ತು ಬಿಡದಿ ಎರಡೂ ಯೋಜನೆಗೆ ಸಹಿ ಹಾಕಿದ್ದು ಯಾರು' ಎಂದು ಪ್ರಶ್ನಿಸಿದರು .
ಅವರು ಮಾಡಿದ ಯೋಜನೆಯನ್ನು ನಾವು ಮುಂದುವರಿಸಿದ್ದೇವೆ. ರೈತರು ಯಾರೂ ಇಲ್ಲ, ಹೊರಗಡೆ ಕ್ಷೇತ್ರದ ಕಾರ್ಯಕರ್ತರನ್ನು ತಂದು ಹೋರಾಟ ನಡೆಸುತ್ತಿದ್ದಾರೆ. ಅದು ಪ್ರಜಾಪ್ರಭುತ್ವದ ಹಕ್ಕು, ಬೇಡ ಎನ್ನಲು ಆಗಲ್ಲ ಎಂದು ಹೇಳಿದರು.
ನಾವು ಅವರು ಮಾಡಿದ ಯೋಜನೆಗಳನ್ನು ಮುಂದುವರಿಸಿದ್ದೇವೆ, ಅವರು ರೈತರಿಗೆ 25 ಲಕ್ಷ ರೂ. ಪರಿಹಾರ ಕೊಡುವುದಾಗಿ ಹೇಳಿದರು. ನಾವು 2 ಕೋಟಿ ರೂ.ನಿಂದ 3 ಕೋಟಿ ಕೊಡುತ್ತಿದ್ದೇವೆ ಎಂದರು.