ನವಶಿಲಾಯುಗದ ಕುರುಹುಗಳ ಪರಿಶೀಲನೆ : ಕನಕಗಿರಿಯ ಬೂದಿ ದಿಬ್ಬಗಳಿಗೆ ಪುರಾತತ್ವ ಇಲಾಖೆ ಭೇಟಿ
ರಾಮದುರ್ಗ, ಆಗೋಲಿ ಬೂದಿ ದಿಬ್ಬಗಳ ಪರಿಶೀಲನೆ
ಕನಕಗಿರಿ: ತಾಲೂಕಿನ ರಾಮದುರ್ಗ ಹೊಸೂರು ಹಾಗೂ ಗಂಗಾವತಿ ತಾಲೂಕಿನ ಆಗೋಲಿ ಅರಣ್ಯ ಪ್ರದೇಶದಲ್ಲಿರುವ ಬೂದಿ ದಿಬ್ಬಗಳಿಗೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಶೇಜೇಶ್ವರ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜು.26ರಂದು ʼವಾರ್ತಾ ಭಾರತಿʼಯಲ್ಲಿ ನವಶಿಲಾಯುಗದ ಮಾನವ ನೆಲೆಯ ಕುರುಹುಗಳು ಪತ್ತೆಯಾಗಿರುವ ಕುರಿತು ವರದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಗೋಲಿ ಪ್ರದೇಶದಲ್ಲಿ ಸುಮಾರು ಒಂದು ಎಕರೆ ವ್ಯಾಪ್ತಿಯಲ್ಲಿರುವ ಬೂದಿ ದಿಬ್ಬ, ಮಣ್ಣಿನ ಮಡಿಕೆ ಚೂರುಗಳು, ಮಾನವನ ಮೂಳೆಗಳು ಹಾಗೂ ತಲೆಬುರುಡೆ ಅವಶೇಷಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಇದೇ ವೇಳೆ ರಾಮದುರ್ಗ ಹೊಸೂರಿನಲ್ಲಿರುವ ಸುಮಾರು ಅರ್ಧ ಎಕರೆ ವಿಸ್ತೀರ್ಣದ ಬೂದಿ ದಿಬ್ಬವನ್ನೂ ವೀಕ್ಷಿಸಿದರು. ಪ್ರಾಥಮಿಕ ಪರಿಶೀಲನೆಯ ಪ್ರಕಾರ ಇವು ನವಶಿಲಾಯುಗದ ಕಾಲಕ್ಕೆ ಸೇರಿದ ಕುರುಹುಗಳಾಗಿರುವುದು ದೃಢಪಟ್ಟಿದ್ದು, ವೈಜ್ಞಾನಿಕ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆ ವೇಳೆ ಪುರಾತತ್ವ ಇಲಾಖೆಯ ಸಹಾಯಕ ಮಂಜಾ ನಾಯ್ಕ ಹಾಗೂ ಇಂಜಿನಿಯರ್ ಸತೀಶ ಉಪಸ್ಥಿತರಿದ್ದರು. ಈ ವೇಳೆ ಪುರಾತತ್ವ ಸಹಾಯಕ ಮಂಜಾ ನಾಯ್ಕ, ಇಂಜಿನಿಯರ್ ಸತೀಶ ಇದ್ದರು.
ಈ ಕುರುಹುಗಳು ಆಗೋಲಿ, ರಾಮದುರ್ಗದ ಬೂದಿ ದಿಬ್ಬಗಳ ನವ ಶಿಲಾಯುಗಕ್ಕೆ ಸಂಬಂಧಿಸಿವೆ. ಇವುಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ. ನಾಮಫಲಕ ಮತ್ತು ಮುಳ್ಳುತಂತಿ ಅಳವಡಿಸಿ ರಕ್ಷಣೆ ಮಾಡಲಾಗುವುದು.
-ಶೇಜೇಶ್ವರ, ಉಪ ನಿರ್ದೇಶಕರು, ಪ್ರಾಚ್ಯವಸ್ತು ಇಲಾಖೆ, ಕಮಲಾಪುರ