×
Ad

ಕನಕಗಿರಿ | ತಲವಾರು ಹಿಡಿದು ಫೋಟೋ ಪೋಸ್ಟ್ : ಯುವಕನ ವಿರುದ್ಧ ಪ್ರಕರಣ ದಾಖಲು

Update: 2026-01-30 23:33 IST

ಕನಕಗಿರಿ : ಕೈಯಲ್ಲಿ ತಲವಾರ ಹಿಡಿದುಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನೊಬ್ಬನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲ್ಲೂಕಿನ ವಡಕಿ ಗ್ರಾಮದ ಆನಂದ ಹನುಮಂತಪ್ಪ ಎಂಬ ಯುವಕ ತಲವಾರ ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತನ್ನ ಐಡಿ ಖಾತೆಯಲ್ಲಿ ಜ.8ರಂದು ಪೋಸ್ಟ್ ಮಾಡಿರುವುದು ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆಯಾಗಿದ್ದು, ಈ ಕುರಿತು ಕಾನ್‌ಸ್ಟೇಬಲ್ ಶ್ರವಣಕುಮಾರ ಅವರು ದೂರು ನೀಡಿದ್ದಾರೆ.

ಶಸ್ತ್ರಾಸ್ತ್ರ ಕಾಯಿದೆ–1959ರ ಪ್ರಕಾರ ಯಾವುದೇ ಪರವಾನಿಗೆ ಪಡೆಯದೇ ಶಸ್ತ್ರಾಸ್ತ್ರಗಳನ್ನು ಹೊಂದುವುದು ಮತ್ತು ಪ್ರದರ್ಶಿಸುವುದು ನಿಷೇಧವಿದ್ದರೂ, ಆನಂದ ಮನೆಯ ಹತ್ತಿರ ಕಬ್ಬಿಣದ ತಲವಾರನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸದರಿ ಯುವಕನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಡಿ. ಫೈಜುಲ್ಲಾ ತಿಳಿಸಿದ್ದಾರೆ.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News