×
Ad

ಕೊಪ್ಪಳ | ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ: ಸಚಿವ ಶಿವರಾಜ್‌ ತಂಗಡಗಿ

Update: 2025-09-17 18:55 IST

ಕೊಪ್ಪಳ : ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್‌ ಎಸ್.ತಂಗಡಗಿ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಆಂಜನಾದ್ರಿ ಬೆಟ್ಟವು ಆಂಜನೇಯನ ಜನ್ಮಸ್ಥಳವೆಂದು ಪ್ರಸಿದ್ಧ. ಈ ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದಿಂದಲೇ ಅನುದಾನ ಒದಗಿಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಒದಗಿಸಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.

ಅವರು ಅಧಿಕಾರಿಗಳಿಗೆ, ಟ್ರಿ ಪಾರ್ಕ್, ಶೌಚಗೃಹಗಳು, ಪಾರ್ಕಿಂಗ್ ವ್ಯವಸ್ಥೆ, ಪ್ರದಕ್ಷಿಣಾ ಪಥ, ರಸ್ತೆ ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಜೊತೆಗೆ, ಪ್ರತಿ ವರ್ಷ ನಡೆಯುವ ಹನುಮಮಾಲಾ ಕಾರ್ಯಕ್ರಮದ ವೇಳೆ ಮಾಲಾಧಾರಿಗಳಿಗೆ ಶಾಶ್ವತವಾಗಿ ಭೋಜನಾಲಯ ನಿರ್ಮಿಸುವ ಪ್ರಸ್ತಾವನೆ ತಯಾರಿಸಲು ನಿರ್ದೇಶಿಸಿದರು.

ಹುಲಿಗೆಮ್ಮ ದೇವಿ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಇತರೆ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡಲಾಗುವುದು. “ಜಿಲ್ಲೆಯ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಿ, ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು” ಎಂದರು.

ಸಭೆಯಲ್ಲಿ ಭಾಗವಹಿಸಿದ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಮಾತನಾಡಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಅಗತ್ಯವಿರುವ ಭೂಮಿಗಾಗಿ ಕೇಂದ್ರ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್‌, ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಶ್ರೀನಿವಾಸ್ ಗುಪ್ತಾ, ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News