ಕೊಪ್ಪಳ | ತಳುವಗೇರಾ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣ :15 ಆರೋಪಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಕೊಪ್ಪಳ: 2019ರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಜಾತ್ರೆ ವೇಳೆ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 15 ಅಪರಾಧಿಗಳಿಗೆ ತಲಾ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸಿ. ಚಂದ್ರಶೇಖರ ಅವರು ಫೆ.28, 2026ರಂದು ತೀರ್ಪು ನೀಡಿದ್ದಾರೆ. ಕಳಕಪ್ಪ, ದೊಡ್ಡಪ್ಪ, ನಾಗಪ್ಪ, ರಮೇಶ್ @ ಕೆಂಪಣ್ಣ, ಕೃಷ್ಣ, ಚಿದಾನಂದ, ಶರಣಪ್ಪ, ಬಸವರಾಜ, ಮಂಜುನಾಥ, ಅಮರಪ್ಪ, ನೀಲಪ್ಪ, ಚಂದ್ರಶೇಖರ, ಯಮನೂರಪ್ಪ, ತಿಪ್ಪಣ್ಣ ಹಾಗೂ ಮುತ್ತಪ್ಪ ಸೇರಿ ಒಟ್ಟು 15 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.
ನ್ಯಾಯಾಲಯವು ಭಾ.ದಂ.ಸಂ ಕಲಂ 143, 147, 148, 323, 324, 335, 506, 304(1) ಹಾಗೂ 149 ಅಡಿಯಲ್ಲಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 4,12,500 ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 40% ಅಂದರೆ 1,65,000 ರೂ. ಅನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ 15% ಅಂದರೆ 62,000 ರೂ. ನೀಡಲು ಆದೇಶಿಸಲಾಗಿದೆ.
ಇದೇ ಪ್ರಕರಣದಲ್ಲಿ ಆರೋಪಿತರಾಗಿದ್ದ ಕೊಂತವ್ವ ಮತ್ತು ರೇಣವ್ವ ವಿರುದ್ಧದ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ವಾದ ಮಂಡಿಸಿದರು. ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ ಎ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಾ.27ರ, 2019ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಳುವಗೇರಾ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ಜಗದೀಶ ಹವಾಲ್ದಾರ ಮತ್ತು ಸ್ನೇಹಿತರು ಪಿಪಿ ಹಾಗೂ ಬಲೂನ ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರ ಸಾಗುತ್ತಿದ್ದ ವೇಳೆ, ಆರೋಪಿಗಳು ಅಕ್ರಮ ಕೂಟ ರಚಿಸಿ ದಾಳಿ ನಡೆಸಿದ್ದರು.
ಕ್ರಿಕೆಟ್ ಸ್ಟಂಪ್ ಮತ್ತು ಕಲ್ಲಿನಿಂದ ಮಲ್ಲಪ್ಪ ಕಂದಕೂರ ಅವರ ತಲೆಗೆ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇತರರಿಗೆ ತೀವ್ರ ಹಾಗೂ ಸಾಮಾನ್ಯ ಗಾಯಗಳಾಗಿದ್ದವು. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ವೃತ್ತ ನಿರೀಕ್ಷಕ ಸುರೇಶ್ ತಳವಾರ ನಡೆಸಿ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.