×
Ad

ಕನಕಗಿರಿ | ಕನಕಾಚಲಪತಿ ರಥೋತ್ಸವಕ್ಕೆ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಲು ಸೂಚನೆ

Update: 2026-03-03 18:03 IST

ಕನಕಗಿರಿ: ಮಾ.11ರಂದು ನಡೆಯಲಿರುವ ಕನಕಾಚಲಪತಿ ರಥೋತ್ಸವದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಶರಣೆಗೌಡ ಪಾಟೀಲ, ನೂರುಸಾಬ್ ಗಡ್ಡಿಗಾಲ, ರಾಜಾಸಾಬ್ ನಂದಾಪುರ ಅವರು ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪುಷ್ಕರಣಿ, ಎಪಿಎಂಸಿ ಆವರಣ, ಪೊಲೀಸ್ ವಸತಿ ಗೃಹ, ಚಿದಾನಂದ ಮಠ ಸೇರಿದಂತೆ ಭಕ್ತರು ತಂಗುವ ಸ್ಥಳಗಳಲ್ಲಿ ಕುಡಿಯುವ ನೀರು, ಬೆಳಕು ಹಾಗೂ ಸ್ವಚ್ಛತೆ ವ್ಯವಸ್ಥೆ ಮಾಡಬೇಕು. ತಾಪಂ ಇಒ ಹಾಗೂ ತಹಶೀಲ್ದಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರ ಪಡೆದು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರು.

ರಥೋತ್ಸವದ ನಿಮಿತ್ತ ಪ್ರತಿದಿನ ಉತ್ಸವ ಮೆರವಣಿಗೆ ನಡೆಯುತ್ತಿರುವುದರಿಂದ ರಾಜಬೀದಿಯಲ್ಲಿ ಆಯಾ ಸಮಯಕ್ಕೆ ನೀರು ಹರಿಸಿ ಧೂಳು ನಿಯಂತ್ರಿಸಬೇಕೆಂದು ತಿಳಿಸಿದರು.

ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೋಲಾಗುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ನೀರು ವ್ಯರ್ಥ ಮಾಡುವ ಮನೆ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಸಂಘ-ಸಂಸ್ಥೆ ಹಾಗೂ ಸಮಾಜಗಳಿಗೆ ಸಿಎ ನಿವೇಶನ ನೀಡಲು ಸಭೆ ಒಪ್ಪಿಗೆ ಸೂಚಿಸಿತು.

ಅಮೃತ ಯೋಜನೆ ಕಾಮಗಾರಿಗೆ ಗುತ್ತಿಗೆದಾರ ತರಾಟೆ :

ಪಟ್ಟಣದಲ್ಲಿ 202 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಅಮೃತ ನಗರೋತ್ಥಾನ ಯೋಜನೆಯ ಶುದ್ಧ ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಸದಸ್ಯರು ಆರೋಪಿಸಿದರು. ಪೈಪ್‌ಲೈನ್ ಕೆಲಸ ಮುಗಿದ ಸ್ಥಳಗಳಲ್ಲಿ ಕಾಂಕ್ರೀಟ್ ಮತ್ತು ಫೇವರ್ಸ್ ಅಳವಡಿಸುವುದಾಗಿ ಹೇಳಿದ ಅಧಿಕಾರಿಗಳು ಕಾಣಿಸಿಕೊಳ್ಳುತ್ತಿಲ್ಲ. ತೆಗ್ಗು-ಉಬ್ಬು ಪ್ರದೇಶಗಳಲ್ಲಿ ಜನರು ಬಿದ್ದು ಗಾಯಗೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ನಾಮನಿರ್ದೇಶಕ ಸದಸ್ಯ ಗಂಗಾಧರ ಚೌಡ್ಕಿ ಸೇರಿದಂತೆ ಇತರರು ಪ್ರಶ್ನಿಸಿದರು.

ಕಾಮಗಾರಿ ಆರಂಭದಲ್ಲಿ ತೋರಿದ ಉತ್ಸಾಹ ಈಗ ಕಾಣುತ್ತಿಲ್ಲ. ಕಾಮಗಾರಿ ಅವಧಿ ಸಮೀಪಿಸುತ್ತಿದ್ದರೂ ವೇಗ ಪಡೆಯುತ್ತಿಲ್ಲ ಎಂದು ಸದಸ್ಯ ರಾಜಾಸಾಬ್ ನಂದಾಪುರ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆ ನಿಮಿತ್ತ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಗುತ್ತಿಗೆದಾರರು ಉತ್ತರಿಸಿದರು. ಈ ವೇಳೆ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮಧ್ಯೆ ಚರ್ಚೆ ನಡೆಯಿತು.

ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಗೈರುಹಾಜರಿಯಲ್ಲಿ ಗುತ್ತಿಗೆದಾರ ಉತ್ತರ ನೀಡಿದುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.

ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಜಾತ್ರೆ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದರು.

ಸಭೆಯಲ್ಲಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಸದಸ್ಯರಾದ ಹುಸೇನಬೀ ಚಳ್ಳಮರದ, ಸೈನಾಜಬೇಗಂ ಹಾಗೂ ನಾಮನಿರ್ದೇಶಕ ಸದಸ್ಯ ಹನುಮೇಶ ಹಡಪದ ಉಪಸ್ಥಿತರಿದ್ದರು.

ಕೋರ್ಂ ಕೊರತೆ – ಎರಡು ಗಂಟೆ ವಿಳಂಬ

ಹಿಂದಿನ ಸಭೆಯಲ್ಲಿ ಕೋರ್ಂ ಕೊರತೆಯಿಂದ ಸಭೆ ಮುಂದೂಡಲಾಗಿತ್ತು. ಈ ಸಲವೂ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ 12.30ರವರೆಗೆ ಆರಂಭವಾಗಲಿಲ್ಲ. ಅಧ್ಯಕ್ಷೆ ಸೇರಿದಂತೆ ಐವರು ಮಾತ್ರ ಹಾಜರಾಗಿದ್ದರಿಂದ ಸಭೆ ನಡೆಯಲು ಅಗತ್ಯವಿದ್ದ ಆರು ಸದಸ್ಯರ ಸಂಖ್ಯೆಯ ಕೊರತೆ ಉಂಟಾಯಿತು. ನಂತರ ಬೆಂಬಲಿಗ ಸದಸ್ಯರೊಬ್ಬರು ಸದಸ್ಯೆ ಹುಸೇನಬೀ ಅವರ ಮನೆಯಲ್ಲಿ ತೆರಳಿ ಅವರನ್ನು ಸಭೆಗೆ ಕರೆತಂದ ಬಳಿಕ ಸಭೆ ಆರಂಭವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News