ಕೊಪ್ಪಳ | ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ : ಡಿಸಿ ಸುರೇಶ್ ಇಟ್ನಾಳ
ಕೊಪ್ಪಳ : ಅಂಜನಾದ್ರಿಯ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಅವರು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಗಂಗಾವತಿ ಶಾಸಕರೊಂದಿಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಬಳಿಕ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅಂಜನಾದ್ರಿಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳ ಬಾರ್ ಚಾರ್ಟ್ ತಕ್ಷಣ ಒದಗಿಸಬೇಕು. ಈಗಾಗಲೇ ಆರಂಭಿಸಿರುವ ಎಲ್ಲಾ ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಹನುಮಮಾಲಾ ಕಾರ್ಯಕ್ರಮ ಡಿಸೆಂಬರ್‌ನಲ್ಲಿ ನಡೆಯಲಿರುವುದರಿಂದ ಪ್ರವಾಸಿಗರು ಹಾಗೂ ಭಕ್ತರಿಗೆ ಅನುಕೂಲವಾಗುವಂತೆ ಡಾರ್ಮಿಟರಿ ಬ್ಲಾಕ್‌ಗಳು, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಸೆಪ್ಟಿಕ್ ಟ್ಯಾಂಕ್, ಬೋರ್ವೆಲ್, ಪಾತ್‌ವೇ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪ್ರದಕ್ಷಿಣೆ ಪಥ ಹಾಗೂ ಥೀಮ್ ಆಧಾರಿತ ಮೆಟ್ಟಿಲು ಕಾಮಗಾರಿಗಳಿಗೆ ಅಗತ್ಯ ಭೂಮಿಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕೆಂದು ತಿಳಿಸಿ, ಅಂಜನಾದ್ರಿ ಮುಖ್ಯರಸ್ತೆಯ ಅಗಲೀಕರಣ ಹಾಗೂ ವಿದ್ಯುತ್ ಕಂಬ ಅಳವಡಿಕೆಗೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.
ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಮಾತನಾಡಿ, ಅಂಜನಾದ್ರಿ ಅಭಿವೃದ್ಧಿಯ ಪ್ರದಕ್ಷಿಣೆ ಪಥ, ಮೆಟ್ಟಿಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ನಂತರ ಶಾಶ್ವತ ಪ್ರಸಾದ ನಿಲಯ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. ಉತ್ತರ ಭಾರತದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ರಸ್ತೆಯ ಅಗಲೀಕರಣ ಹಾಗೂ ವಿದ್ಯುತ್ ದೀಪ ಅಳವಡಿಕೆ ತುರ್ತು ಅಗತ್ಯವಾಗಿದೆ. ಅಂಜನಾದ್ರಿ ರೋಪ್‌ವೇ ಕಾಮಗಾರಿಯ ಡಿ.ಪಿ.ಆರ್ ಸಿದ್ಧವಾಗಿದೆ, ಅದನ್ನು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಬೇಕು” ಎಂದರು.
ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹಂಪಿ ವಿಶ್ವ ಪರಂಪರೆ ಪ್ರದೇಶ ಪ್ರಾಧಿಕಾರದ ಆಯುಕ್ತ ರಮೇಶ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ನಾಯ್ಕ್, ತಹಶಿಲ್ದಾರ ಯು. ನಾಗರಾಜ, ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್ ರಾವ್, ಸೃಷ್ಟಿ ಆರ್ಕಿಟೆಕ್ಟ್ ಮುಖ್ಯಸ್ಥ ಶ್ರೀಪಾದ್ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.