×
Ad

ಕೊಪ್ಪಳ ಯುವಕನ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಪ್ರೀತಿ ವಿಚಾರಕ್ಕೆ ಕೊಲೆಯಾಗಿದೆ : ಎಸ್‌ಪಿ ರಾಮ್ ಅರಸಿದ್ಧಿ

Update: 2025-08-05 12:18 IST

ಆರೋಪಿಗಳಾದ ಸಾಧಿಕ್ ಹುಸೇನ್/ಗೇಸುದರಾಜ್‌ ಪಟೇಲ್/ಮೆಹಬೂಬ್ ಸಿಕ್ಕಲ್‌ಗಾರ್‌/ನಿಝಾಮುದ್ದಿನ್

ಕೊಪ್ಪಳ : ಪ್ರೀತಿ ವಿಚಾರವಾಗಿ ನಗರದ ಕುರುಬರ ಓಣಿ ನಿವಾಸಿಯಾದ ಗವಿಸಿದ್ದಪ್ಪ ನಾಯಕ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಅವರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರವಿವಾರ ರಾತ್ರಿ ವಾಲ್ಮೀಕಿ ಸಮಾಜದ ಗವಿಸಿದ್ದಪ್ಪ ನಾಯಕ್ ಎನ್ನುವ ಯುವಕನ್ನು ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಅದೇ ದಿನ ಪ್ರಮುಖ ಆರೋಪಿಯಾದ ಸಾಧಿಕ್ ಹುಸೇನ್ ಕೊಲ್ಕಾರ್ ಎನ್ನುವವನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ, ಉಳಿದ ಮೂವರು ಆರೋಪಿಗಳಾದ ಗೇಸುದರಾಜ್‌ ಪಟೇಲ್, ನಿಝಾಮುದ್ದಿನ್ ಮತ್ತು ಮೆಹಬೂಬ್ ಸಿಕ್ಕಲ್‌ಗಾರ್‌ ಎಂಬಾತನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರಿಂದ ಎರಡು ಲಾಂಗ್, ಒಂದು ಬೈಕ್ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಹತ್ಯೆಗೆ ಕಾರಣ:

ಸಾಧಿಕ್ ಹುಸೇನ್ ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನೇ ಗವಿಸಿದ್ದಪ್ಪ ನಾಯಕ್ ಕೂಡ ಪ್ರೀತಿಸುತ್ತಿದ್ದ. ತಾನು ಪ್ರೀತಿಸಿದ ಯುವತಿಗೆ ತೊಂದರೆ ಆಗುತ್ತಿರುವುದನ್ನು ಸಾಧಿಕ್ ಸಹಿಸಿಕೊಳ್ಳಲಾಗದೇ ಈ ಹತ್ಯೆ ಮಾಡಿದ್ದಾನೆ. ಈ ಕೊಲೆ ಕೇವಲ ಪ್ರೀತಿಯ ವಿಚಾರವಾಗಿ ನಡೆದಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.

ಆರೋಪಿಯನ್ನು ವಿಚಾರಣೆ ನಡೆಸಿದಾಗ, ಗವಿಸಿದ್ದಪ್ಪ ಸಾದಿಕ್ ಪ್ರೀತಿಸುವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆ ಹುಡಗಿ ಕೂಡ ಗವಿಸಿದ್ದಪ್ಪನನ್ನು ಸ್ವಲ್ಪ ದಿನ ಪ್ರೀತಿಸುತ್ತಿದ್ದಳು, ಈ ಕುರಿತು ಎರಡು ಕಡೆ ಸಮಾಜದ ಮುಖಂಡರು ಬುದ್ದಿವಾದ ಹೇಳಿದ್ದರು. ಇದಾದ ನಂತರ ಆ ಹುಡುಗಿ ಸಾದಿಕ್‌ನನ್ನು ಪ್ರೀತಿಮಾಡುತ್ತಿದ್ದಳು ಎಂದು ಹೇಳಿದ್ದಾನೆ ಎಂದು ಹೇಳಿದರು.

ಹತ್ಯೆಯಾದ ದಿನ ಆರೋಪಿ ಸಾದಿಕ್ ಕೈಯಲ್ಲಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದಾನೆ ಎನ್ನುವ ಮಾಹಿತಿ ಇದ್ದು, ಈ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ. ಹತ್ಯೆ ಮಾಡಿದ ಯುವಕರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಆ ಸಂದರ್ಭದಲ್ಲಿ ಆರೋಪಿಗಳು ಗಾಂಜಾ ಸೇವಿಸಿರಲಿಲ್ಲ ಎಂದು ತಿಳಿದು ಬಂದಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News