ಕೊಪ್ಪಳ | ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತ ಖಂಡಿಸಿ ಎಸ್ ಯುಸಿಐ(ಸಿ) ನೇತೃತ್ವದಲ್ಲಿ ಪ್ರತಿಭಟನೆ
ಕೊಪ್ಪಳ: ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಹಾಗೂ ಅರ್ಹ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ, ‘ವೃದ್ಧರು, ವಿಧವೆಯರು, ವಿಕಲಚೇತನರು ಸೇರಿದಂತೆ ದುರ್ಬಲ ವರ್ಗದ ಜನರಿಗೆ ಪಿಂಚಣಿಯೇ ಬದುಕಿನ ಪ್ರಮುಖ ಆಸರೆಯಾಗಿದೆ. ಹಲವು ತಿಂಗಳುಗಳಿಂದ ಪಿಂಚಣಿ ಸ್ಥಗಿತಗೊಳಿಸಿರುವುದರಿಂದ ಸಾವಿರಾರು ಬಡ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
‘ಪರಿಶೀಲನೆ ಮತ್ತು ದಾಖಲೆಗಳ ನೆಪದಲ್ಲಿ ಅರ್ಹ ಫಲಾನುಭವಿಗಳನ್ನು ಕಚೇರಿಗಳಿಗೆ ಅಲೆದಾಡಿಸುವ ಬದಲು, ಅವರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಸ್ಥಗಿತಗೊಂಡಿರುವ ಎಲ್ಲ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮರುಜಾರಿಗೊಳಿಸಬೇಕು. ಸ್ಥಗಿತಗೊಂಡ ಅವಧಿಯ ಬಾಕಿ ಪಿಂಚಣಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ಪಿಂಚಣಿ ಪರಿಶೀಲನಾ ಪ್ರಕ್ರಿಯೆಯನ್ನು ಸರಳಗೊಳಿಸಿ ಫಲಾನುಭವಿಗಳಿಗೆ ಅನಗತ್ಯ ತೊಂದರೆ ನೀಡಬಾರದು. ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಯನ್ನು ಪಿಂಚಣಿ ಯೋಜನೆಯಿಂದ ಕೈಬಿಡಬಾರದು. ಸರ್ಕಾರದ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಉಂಟಾಗಿರುವ ಲೋಪಗಳನ್ನು ಸರಿಪಡಿಸಿ, ಅರ್ಹರಿಗೆ ನಿರಂತರವಾಗಿ ಪಿಂಚಣಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ಪಿಂಚಣಿ ಯೋಜನೆಗಳ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು 32,000ದಿಂದ 1.20 ಲಕ್ಷಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಆದಾಯ ಮಿತಿಯ ವ್ಯಾಪ್ತಿಗೆ ಬರುವ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಎಲ್ಲ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಶರಣು ಗಡ್ಡಿ ಆಗ್ರಹಿಸಿದರು.
ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ಏರಿಯಾಗಳಿಂದ ಆಗಮಿಸಿದ್ದ ವೃದ್ಧರು, ವಿಧವಾ ಮಹಿಳೆಯರು ಮತ್ತು ವಿಕಲಚೇತನರು ಸೇರಿದಂತೆ ಹಲವಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಂಗಳೇಶ ರಾಥೋಡ್, ಹನುಮಂತ ಕಟಿಗಿ, ಪ್ರದೀಪ್, ದ್ಯಾಮಣ್ಣ ಡೊಳ್ಳಿನ, ಮದುಕಪ್ಪ, ಶ್ರೀಕಾಂತ್, ನಾಗಪ್ಪ, ಸತ್ಯಮ್ಮ, ಕರಿಯಪ್ಪ, ಸಂಜೀವಪ್ಪ, ವೆಂಕಟೇಶ, ಪಾತವ್ವ, ಕೆಂಚಮ್ಮ, ಗಂಗವ್ವ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.