ಕೊಪ್ಪಳ | ಆ.1ರಂದು ಒಳಮೀಸಲಾತಿ ಜಾರಿಗಾಗಿ ಜನಾಕ್ರೋಶ ಪ್ರತಿಭಟನೆ
ಕೊಪ್ಪಳ: ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ವಿವಿಧ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಆ.1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜನಾಕ್ರೋಶ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಗಣೇಶ ಹೊರತಟ್ನಾಳ ಹೇಳಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಳ ಮೀಸಲಾತಿ ಜಾರಿಗಾಗಿ ಕಳೆದ 35 ವರ್ಷಗಳಿಂದ ವಿವಿಧ ದಲಿತಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದೆ. ಇದರ ಪರಿಣಾಮವಾಗಿ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ 2024 ಆ.1 ರಂದು ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ, ತೀರ್ಪು ನೀಡಿ ಒಂದು ವರ್ಷ ಕಳೆಯುತ್ತಿದ್ದರೂ, ನ್ಯಾಯಾಲಯದ ಆದೇಶವನ್ನು ಸರ್ಕಾರ ಜಾರಿಗೊಳಿಸದೇ ಕುಂಟು ನೆಪ ಹೇಳುತ್ತಾ ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಗತಿಸಿವೆ. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ಭರವಸೆ ನೀಡಲಾಗಿತ್ತು, ಎರಡು ವರ್ಷಗತಿಸಿದರೂ, ಸರ್ಕಾರ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಈ ಹಿನ್ನೆಲೆ ಮಾದಿಗ ಸಮುದಾಯ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದೆ. ಒಳ ಮೀಸಲಾತಿ ಜಾರಿಯಾಗದಿದ್ದರೆ ಸರ್ಕಾರ ಮುಂದಿನ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
ಆ.1ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಜಿಲ್ಲಾದ್ಯಂತ ನಾಲ್ಕು ಸಾವಿರಕ್ಕೂ ಅಧಿಕ ಮಾದಿಗ ಸಮುದಾಯದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಹನುಮೇಶ ಕಡೇಮನಿ, ದ್ಯಾಮಣ್ಣ ಪೂಜಾರ್, ಮಲ್ಲಿಕಾರ್ಜುನ ಪೂಜಾರ್, ಗಾಳೆಪ್ಪ ಹಿಟ್ನಾಳ, ಫಕೀರಪ್ಪ ಬಂಗ್ಲಿ, ಜುಂಜಪ್ಪ ಮೆಳ್ಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.