ಕೊಪ್ಪಳ| ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ; ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಕೊಪ್ಪಳ: ತಾಲೂಕಿನ ಬೂದಗುಂಪ ಗ್ರಾಮದಲ್ಲಿ ದ್ಯಾಮಣ್ಣ ವಜ್ರಬಂಡಿ (36) ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಅರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ ಅವರು ಹೇಳಿದ್ದಾರೆ.
ಈ ಕುರಿತು ಶುಕ್ರವಾರದಂದು ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕೊಪ್ಪಳ ಗ್ರಾಮೀಣ ವೃತ್ತದ, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಒಬ್ಬ ವ್ಯಕ್ತಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು, ಈ ಕುರಿತು ತನಿಖೆ ನಡೆಸಿದಾಗ ಮೃತ ವ್ಯಕ್ತಿ ಬೂದಗುಂಪ ಗ್ರಾಮದ ನಿವಾಸಿ ದ್ಯಾಮಣ್ಣ ಎಂದು ತಿಳಿದು ಬಂದಿತ್ತು. ಮುಂದಿನ ವಿಚಾರಣೆಯ ಸಲುವಾಗಿ ಸೋಮಪ್ಪ (35) ಮತ್ತು ದ್ಯಾಮಣ್ಣ ವಜ್ರಬಂಡಿಯ ಪತ್ನಿ ನೇತ್ರಾವತಿ (31) ಎಂಬವರನ್ನು ವಶಕ್ಕೆ ಪಡೆಡು ವಿಚಾರಿಸಿದಾಗ ಇವರೇ ಈ ಕೊಲೆಯನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
(ಕೊಲೆಯಾದ ದ್ಯಾಮಣ್ಣ ವಜ್ರಬಂಡಿ)
ಸೋಮಪ್ಪ ಮತ್ತು ನೇತ್ರಾವತಿ ಇವರ ನಡುವೆ ಇದ್ದ ವಿವಾಹೇತರ ಸಂಬಂಧವೇ ಈ ಕೊಲೆಗೆ ಕಾರಣ. ಕೊಲೆ ನಡೆದ 3-4 ದಿನ ಮುಂಚೆಯೂ ಆರೋಪಿಗಳು ದ್ಯಾಮಣ್ಣ ಹತ್ಯೆಗೆ ಯತ್ನಿಸಿ ಫಲಕಾರಿಯಾಗದಿದ್ದಕ್ಕೆ ನಂತರ ಹೊಲಕ್ಕೆ ಕರೆದು ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ಕೊಲೆ ಮಾಡಿದ ಸ್ಥಳದಿಂದ ಬೈಕಿನಲ್ಲಿ ಸುಮಾರು 5-6 ಕಿ.ಮಿ ಗಳ ದೂರಕ್ಕೆ ಸಾಗಿಸಿ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ರಾಡ್ ಮತ್ತು ಪೆಟ್ರೋಲ್ ಖರೀದಿಸಿದ ಸಿಸಿಟಿವಿ ಸಾಕ್ಷ್ಯಗಳು ದೊರೆತಿವೆ ಎಂದು ಅವರು ಹೇಳಿದರು.
ಕೊಲೆ ಮಾಡಲು ಬಳಿಸಿದ ಒಂದು ಬೈಕ್ ಮತ್ತು ಸಾಧನಗಳನ್ನು ಜಪ್ತಿ ಮಾಡಲಾಗಿದ್ದು ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ್ ಕುಮಾರ, ಡಿ.ಎಸ್. ಮುತ್ತಣ್ಣ ಸರವಗೋಳ ಕೊಪ್ಪಳ ಗ್ರಾಮೀಣ ಠಾಣೆಯ ವೃತ್ತ ನಿರೀಕ್ಷಕ ಡಿ.ಸುರೇಶ ಅವರು ಉಪಸ್ಥಿತರಿದ್ದರು.