×
Ad

ಮಳೆ ಕೊರತೆ: ಆತಂಕದಲ್ಲಿ ಅವಿಭಜಿತ ದ.ಕ. ಜಿಲ್ಲೆ

Update: 2023-09-02 11:03 IST

ಮಂಗಳೂರು: ರಾಜ್ಯದಲ್ಲಿ ಬರದ ಸ್ಥಿತಿ ವಿಸ್ತಾರಗೊಳ್ಳುತ್ತಾ ಸಾಗಿರುವಂತೆಯೇ, ಸಮುದ್ರ ಹಾಗೂ ನದಿಗಳಿಂದ ಸುತ್ತುವರಿದಿರುವ ದ.ಕ. ಜಿಲ್ಲೆಯಲ್ಲಿ ಮಳೆಗಾಲದಲ್ಲಿಯೂ ಬಿಸಿಲ ಝಳಕ್ಕೆ ಜನಜೀವನ ನಲುಗುತ್ತಿದೆ. ಮಾತ್ರವಲ್ಲದೆ, ಜೀವ ನದಿಗಳಲ್ಲಿ ನೀರಿನ ಒಳಹರಿವು ಆಗಸ್ಟ್ ತಿಂಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಈ ಬಾರಿ ವರ್ಷಾಂತ್ಯದಲ್ಲೇ ಕುಡಿಯುವ ನೀರಿನ ಆತಂಕಕ್ಕೆ ಕಾರಣವಾಗಿದೆ.

ಜುಲೈನಲ್ಲಿ ಒಂದೆರಡು ವಾರದ ಮಳೆ ಹೊರತುಪಡಿಸಿದರೆ, ಈ ಬಾರಿ ಮಳೆಗಾಲದ ವಾತಾವರಣೇ ಕಂಡು ಬಂದಿಲ್ಲ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿತ್ತು. (ಜುಲೈನಲ್ಲಿ ವಾಡಿಕೆಯಂತೆ 1,232 ಮಿ.ಮೀ. ಮಳೆಯಾಗುತ್ತಿದ್ದು, ಈ ಬಾರಿ ಜುಲೈನಲ್ಲಿ 1,486 ಮಿ.ಮೀ. ಮಳೆ ದಾಖಲಾಗಿತ್ತು).

ಮಳೆ ಮತ್ತು ಮೀನುಗಾರಿಕೆಗೆ ಅವಿನಾಭಾವ ನಂಟಿದೆ. ಜುಲೈ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತದೆ. ಆದರೆ ಈ ಬಾರಿ ಅಂತಹ ಮಳೆಯೇ ಕಂಡು ಬಂದಿಲ್ಲ. ಗುಡ್ಡ ಕಾಡುಗಳಿಂದ ಹರಿದು ಬರುವ ಕೆಂಪು ಮಿಶ್ರಿತ ಮಳೆ ನೀರಿನ ಜತೆ ಮತ್ಸ್ಯ ಸಂಪತ್ತಿಗೆ ಆಹಾರವಾದ ಹುಳ ಜಂತು ಕಡಲ ಒಡಲು ಸೇರುತ್ತದೆ. ಇದು ಮೀನು ಸಂತತಿ ವೃದ್ಧಿಗೆ ಪೂರಕವಾದರೆ, ಮಳೆಯ ಸಂದರ್ಭ ತೂಫಾನ್ ಏರ್ಪಟ್ಟು ಸಮುದ್ರ ಮಂಥನಕ್ಕೆ ಕಾರಣವಾಗಿ ಮತ್ಸ್ಯ ಸಂಪತ್ತು ಕಡಲ ಕಿನಾರೆಗೆ ಆಗಮಿಸುತ್ತದೆ. ಆದರೆ ಈ ಬಾರಿ ಆ ರೀತಿ ಮೀನುಗಾರಿಕೆಗೆ ಪೂರಕವಾದ ತೂಫಾನ್ ಇನ್ನೂ ಕಂಡು ಬಂದಿಲ್ಲ.

-ಚೇತನ್ ಬೆಂಗ್ರೆ, ಮೀನುಗಾರ ಮುಖಂಡರು

ಆಗಸ್ಟ್‌ನಲ್ಲಿ ಶೇ. 73 ಮಳೆ ಕೊರತೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮಾಹಿತಿಯ ಪ್ರಕಾರ, ದ.ಕ. ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ವಾಡಿಕೆಯಂತೆ ಸುರಿಯಬೇಕಾಗಿದ್ದ 892 ಮಿ.ಮೀ. ಮಳೆಯ ಬದಲಿಗೆ ಸುರಿದಿರುವುದು ಕೇವಲ 239ಮಿ.ಮೀ. ಮಾತ್ರ!(ಶೇ.73 ಮಳೆ ಕೊರತೆ). ಜೂನ್ 1ರಿಂದ ಆ.31ರವರೆಗೆ ಜಿಲ್ಲೆಯಲ್ಲಿ 3,065ಮಿ.ಮೀ. ಮಳೆಯಾಗಬೇಕಿದ್ದು, ಸುರಿದಿರುವುದು 2,069 ಮಿ.ಮೀ. ಮಾತ್ರ. ಈ ಮೂಲಕ ಈ ಅವಧಿಯಲ್ಲಿ ಶೇ. 32ರಷ್ಟು ಮಳೆ ಕೊರತೆಯಾಗಿದೆ. ಜನವರಿಯಿಂದ ಆಗಸ್ಟ್‌ವರೆಗಿನ ಲೆಕ್ಕಾಚಾರದ ಪ್ರಕಾರ 3,308 ಮಿ.ಮೀ. ಮಳೆಯ ಬದಲಿಗೆ ಆಗಿರುವುದು 2,188 ಮಿ.ಮೀ. ಮಾತ್ರ. ಈ ಅವಧಿಯಲ್ಲಿ ಶೇ.34ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ದಾಖಲಾಗಿದೆ.

ಈಗಾಗಲೇ ಆಗಸ್ಟ್‌ನಲ್ಲಿ ಮಳೆ ಬಾರದಿರುವುದರಿಂದ ದ.ಕ. ಜಿಲ್ಲೆ ನದಿಗಳಾದ ಜೀವ ನದಿಗಳು ಮೂಲದಲ್ಲಿಯೇ ಸೊರಗಿವೆ. ಸೆಪ್ಟಂಬರ್‌ನಲ್ಲಿ ಮಳೆ ಬಂದರೂ ನೀರು ಸಂಗ್ರಹಕ್ಕೆ ಸಮಸ್ಯೆ ಎದುರಾಗಲಿದೆ. ಈಗಾಗಲೇ ಖಾಲಿಯಾಗಿರುವ ಪ್ರದೇಶಗಳು ತುಂಬಬೇಕಾಗುತ್ತದೆ. ಹಾಗಾಗಿ ಈ ಬಾರಿ ಡಿಸೆಂಬರ್‌ನಲ್ಲೇ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಗೋಚರಿಸಿದೆ. ಎಲ್ಲಾ ಜೀವ ನದಿಗಳ ಮೂಲ ಪಶ್ಚಿಮ ಘಟ್ಟ. ಪಶ್ಚಿಮ ಘಟ್ಟಗಳ ಮೇಲೆ ವಿವಿಧ ಆಯಾಮಗಳಿಂದೆ ಭಾರೀ ಹೊಡೆತ ಬಿದ್ದಿದೆ. ಅದರ ಜತೆ ಮಳೆಯ ಕೊರತೆ ನದಿಗಳ ಪಾಲಿಗೆ ಸಹಿಸಲಾಗದ ಹೊಡೆತ.

ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ ಮತ್ತು ಚಾರಣಿಗ

ತುಂಬೆ ಡ್ಯಾಂ ಗೇಟ್ ಬಂದ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಗೇಟುಗಳನ್ನು ತೆರೆಯಲಾಗುತ್ತದೆ. ಪಶ್ಚಿಮ ಘಟ್ಟದಿಂದ ಹರಿದು ಬರುವ ಮಳೆ ನೀರು ನದಿಯ ಒಡಲು ಸೇರಿ ಅಲ್ಲಿಂದ ಅಣೆಕಟ್ಟಿನ ಗೇಟುಗಳ ಮೂಲಕ ಸಮುದ್ರ ಸೇರುತ್ತದೆ. ಕರಾವಳಿಯಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿಯೂ ಸಾಮಾನ್ಯವಾಗಿ ಆಗಾಗ್ಗೆ ಮಳೆ ಸುರಿಯುವುದರಿಂದ ನದಿಗಳಿಗೆ ಪಶ್ಚಿಮ ಘಟ್ಟಗಳಿಂದ ಡಿಸೆಂಬರ್‌ವರೆಗೂ ಒಳಹರಿವು ಸಾಮಾನ್ಯವಾಗಿರುವುದರಿಂದ ಬಹುತೇಕವಾಗಿ ಅಣೆಕಟ್ಟಿನ ಗೇಟ್‌ಗಳನ್ನು ಡಿಸೆಂಬರ್ ವೇಳೆಗೆ ಮುಚ್ಚಲಾಗುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲಿಯೇ ಅಣೆಕಟ್ಟಿನ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಅಣೆಕಟ್ಟಿಗೆ ನೀರಿನ ಒಳಹರಿವು ಕಡಿಮೆಯಾಗಿರುವ ಕಾರಣ ಒಟ್ಟು 30 ಗೇಟ್‌ಗಳಲ್ಲಿ ಒಂದು ಮಾತ್ರ ತೆರೆದಿದೆ. ಕಳೆದ ಫೆಬ್ರವರಿ ತಿಂಗಳಿನಿಂದಲೇ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಕಾಡಲಾರಂಭಿಸಿತ್ತು. ಹವಾಮಾನ ಇಲಾಖೆಯ ಪ್ರಕಾರ ಸೆಪ್ಟಂಬರ್ ತಿಂಗಳಲ್ಲಿ ಮತ್ತೆ ಮಳೆಯಾಗುವ ಸೂಚನೆ ನೀಡಲಾಗಿದೆ. ಒಂದು ವೇಳೆ ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಈ ಬಾರಿ ನೀರಿನ ಸಮಸ್ಯೆ ವರ್ಷಾಂತ್ಯಕ್ಕೆ ಕಾಣಿಸಿಕೊಳ್ಳುವ ಆತಂಕವನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹಕ್ಕೆ ಜಿಲ್ಲಾಡಳಿತ ಸೇರಿದಂತೆ ಸ್ಥಳೀಯಾಡಳಿತ ಗಮನ ಹರಿಸುವ ಜತೆಗೆ ನೀರು ಪೋಲಾಗದಂತೆ ಸಾರ್ವಜನಿಕರೂ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಮಳೆ ಕೊರತೆಯಾಗಿರುವುದು ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಭತ್ತ ಸೇರಿದಂತೆ ಕೃಷಿ ಬೆಳೆಗೆ ಅಂತಹ ಯಾವುದೇ ಆತಂಕ ಕಾಣಿಸಿಲ್ಲ. ಜಿಲ್ಲೆಯಲ್ಲಿ ಭತ್ತ ಬೆಳೆಯನ್ನು ಹೊರತುಪಡಿಸಿ ಮಳೆಯಾಧರಿಸಿ ಕೃಷಿ ಬೆಳೆ ಕಡಿಮೆ. ಮುಂದಿನ ದಿನಗಳಲ್ಲೂ ಮಳೆ ಬಾರದಿದ್ದರೆ ತೊಂದರೆ ಆಗಬಹುದು.

- ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ.

ಮೂಲದಲ್ಲೇ ಸೊರಗುತ್ತಿವೆ ನದಿಗಳು: ದ.ಕ. ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ, ಫಲ್ಗುಣಿ, ನಂದಿನಿ, ಸೌಪರ್ಣಿಕ, ಕುಮಾರಧಾರ ನದಿಗಳು ತುಂಬಿ ಹರಿಯಬೇಕಾದರೆ ಚಾರ್ಮಾಡಿ, ಶಿರಾಡಿ, ಬಿಸಿಲೆಘಾಟಿಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಬೇಕು. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಬರದ ಛಾಯೆ ಸಂಪೂರ್ಣವಾಗಿ ಆವರಿಸಿದಂತಿದೆ ಎನ್ನುತ್ತಾರೆ ಪರಿಸರ ಹೋರಾಟಗಾರರು.

ಪ್ರತಿ ವರ್ಷ ಮಳೆಗಾಲದ ಈ ಅವಧಿಯಲ್ಲಿ ತುಂಬಿ ಹರಿಯುವ ನೇತ್ರಾವತಿ ನದಿ ಬೆಳ್ತಂಗಡಿ ಭಾಗದಲ್ಲಿಯೇ ಸೊರಗಿರುವುದು ಕಂಡುಬರುತ್ತಿದೆ.

ಪುತ್ತೂರು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆಯ ಪ್ರಮುಖ ಜೀವನದಿ ಕುಮಾರಧಾರದಲ್ಲೂ ನೀರಿನ ಒಳಹರಿವು ಕ್ಷೀಣಿಸಿದೆ. ಸಾಮಾನ್ಯವಾಗಿ ಮಾರ್ಚ್- ಎಪ್ರಿಲ್ ತಿಂಗಳ ನದಿ ನೀರಿನ ಪರಿಸ್ಥಿತಿ ಈಗ ಕಂಡು ಬರುತ್ತಿದೆ.

ಒಟ್ಟಾರೆ ಶೇ.30ರಷ್ಟು ಕೊರತೆ

ಉಡುಪಿ ಜಿಲ್ಲೆಯಲ್ಲಿ ಜನವರಿ ೧ರಿಂದ ಸೆಪ್ಟೆಂಬರ್ ೧ರವರೆಗೆ ವಾಡಿಕೆ ಮಳೆ ೩೮೩೯ ಮಿ.ಮೀ. ಸುರಿಯಬೇಕಿತ್ತು. ಆದರೆ ಈ ಬಾರಿ ಬಂದಿರುವುದು ೨,೬೮೦ಮಿ.ಮೀ. ಮಾತ್ರ. ಅಂದರೆ ಶೇ.೩೦ರಷ್ಟು ಮಳೆ ಕೊರತೆ ಇಂದಿನವರೆಗೆ ಕಂಡುಬಂದಿದೆ. ಬರೇ ಮಳೆಗಾಲದಲೆಕ್ಕಾಚಾರವನ್ನು ತೆಗೆದುಕೊಂಡರೂ (ಜೂ.೧ರಿಂದ ಸೆ.೧ರವರೆಗೆ) ಜಿಲ್ಲೆಯಲ್ಲಿ ವಾಡಿಕೆ ಮಳೆ ೩,೬೩೮ ಮಿ.ಮೀ. ಮಳೆಯಾಗಬೇಕಿದ್ದಲ್ಲಿ ೨೦೨೩ರಲ್ಲಿ ಬಂದಿರುವುದು ೨,೬೨೭ ಮಿ.ಮೀ.ಮಾತ್ರ. ಅಂದರೆ ಶೇ.೨೮ರಷ್ಟು ಮಳೆ ಕೊರತೆಯಾಗಿದೆ.

ಮೇ ೩೧ರವರೆಗೆ ಜಿಲ್ಲೆಯಲ್ಲಿ ಬರಬೇಕಿದ್ದ ಪ್ರಿ ಮಾನ್ಸೂನ್ ಮಳೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಒಟ್ಟಾರೆ ೧೬೪ಮಿ.ಮೀ. ಮಳೆಯಾಗಬೇಕಿದ್ದಲ್ಲಿ ಬಂದಿದ್ದು ೬೪ಮಿ.ಮೀ. ಮಾತ್ರ. ಅಂದರೆ ಶೇ.೭೩ ರಷ್ಟು ಕೊರತೆಯಾಗಿದೆ. ಇನ್ನು ಜೂನ್ ತಿಂಗಳಲ್ಲಿ ಶೇ.೫೩ರಷ್ಟು ಕೊರತೆ ಕಾಣಿಸಿಕೊಂಡರೆ, ಜುಲೈ ತಿಂಗಳಲ್ಲಿ ಮಾತ್ರ ಏ.೨೫ರಷ್ಟು ಅಧಿಕ ಮಳೆ ಸುರಿದಿದೆ. ಮತ್ತೆ ಆಗಸ್ಟ್ ತಿಂಗಳಿಗೆ ಬಂದರೆ ವಾಡಿಕೆ ಮಳೆ ೧೦೬೪ ಮಿ.ಮೀ. ಆಗಿದ್ದರೆ, ಈ ಬಾರಿ ವಿರಳವಾಗಿ ಸುರಿದು ಕೇವಲ ೩೦೨ಮಿ.ಮೀ. ಮಾತ್ರ ದಾಖಲಾಗಿತ್ತು. ಈ ಮೂಲಕ ಆಗಸ್ಟ್ ತಿಂಗಳಲ್ಲಿ ಶೇ.೭೩ರಷ್ಟು ಕೊರತೆ ಕಾಣಿಸಿಕೊಂಡಿದೆ. ಇದು ನಿಜವಾಗಿ ಆತಂಕ ಹೆಚ್ಚಿಸುವ ವಿಷಯ.

ಕರಾವಳಿ ಜಿಲ್ಲೆಗಳ ಕುರಿತಂತೆ ಇದೇ ಮೊದಲ ಬಾರಿ ಪ್ರಕೃತಿ ಮುನಿದುಕೊಂಡಂತೆ ಭಾಸವಾಗುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳು ಹಿಂದೆಂದೂ ಕಾಣದಂಥ ಪರಿಸ್ಥಿತಿಯನ್ನು ಈ ಬಾರಿ ಎದುರಿಸುತ್ತಿವೆ. ಮಳೆಗಾಲದ ಈ ನಟ್ಟನಡುವಿನ ಅವಧಿಯಲ್ಲಿ ಜನತೆ ಕಡುಬೇಸಿಗೆಯ ದಿನಗಳ ಅನುಭವ ಪಡೆಯುತ್ತಿದ್ದಾರೆ. ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಕೈಕೊಟ್ಟಿರುವ ಮಳೆ, ಇದರಿಂದ ತಡವಾಗಿ ನಾಟಿ ಮಾಡಿದ್ದರೂ ಗದ್ದೆಯಲ್ಲಿ ಒಣಗುತ್ತಿರುವ ಬೆಳೆಯೊಂದಿಗೆ, ಕುಡಿಯುವ ನೀರಿನ ಸಮಸ್ಯೆ ವರ್ಷಾಂತ್ಯದೊಳಗೆ ತಲೆದೋರುವ ಆತಂಕ ಕಾಡತೊಡಗಿದೆ.

ಪ್ರಕೃತಿಯ ಕುರಿತಂತೆ ತೀರಾ ನಿರ್ಲಕ್ಷ್ಯದ ನಿಲುವು ಹೊಂದಿರುವ ಕರಾವಳಿಗರಿಗಿದು ಹೊಸ ಅನುಭವ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಬೇಸಿಗೆಯ ಧಗೆಯನ್ನು ಮೀರಿಸುವ ಉಷ್ಣತೆಯನ್ನು ಜನರು ಇದುವರೆಗೆ ಅನುಭವಿಸಿದ್ದೇ ಇಲ್ಲ. ಬರದಂಥ ಸ್ಥಿತಿ ಕರಾವಳಿಗೆ ಬರುವುದನ್ನು ಕನಸಿನಲ್ಲೂ ಊಹಿಸದ ಜನರಿಗೆ ಈ ಬಾರಿಯ ವಾತಾವರಣ, ಹವಾಮಾನ ಬರದ ಕುರಿತು ಆಲೋಚಿಸುವಂತೆ ಮಾಡುತ್ತಿದೆ.

ಸದ್ಯಕ್ಕೆ ಜಿಲ್ಲೆ ಬರ ಘೋಷಣೆಯ ಹಂತಕ್ಕೆ ಹೋಗಿರದೇ ಇದ್ದರೂ, ನಿರ್ಣಾಯಕವೆನಿಸಿರುವ ಸೆಪ್ಟೆಂಬರ್ ತಿಂಗಳ ಪರಿಸ್ಥಿತಿಯನ್ನು ಆತಂಕ ಹಾಗೂ ಕಾತರದಿಂದ ಎದುರು ನೋಡುವಂತೆ ಮಾಡಿರುವುದು ಸುಳ್ಳಲ್ಲ.

ಕೊರತೆ...ಕೊರತೆ..: ಈ ಬಾರಿ ಮುಂಗಾರು ಪೂರ್ವ ಮಳೆ ಕರಾವಳಿಗೆ ಕೈಕೊಟ್ಟಾಗಲೇ ಜನತೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ತಡವಾಗಿ ಪ್ರಾರಂಭಗೊಂಡರೂ ಜಿಲ್ಲೆಯಲ್ಲಿ ಎಂದೂ ಮಳೆಗೆ ಕೊರತೆಯಾಗಿದ್ದ ಇತಿಹಾಸವೇ ಇರಲಿಲ್ಲ. ಹೀಗಾಗಿ ಜನತೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಮಳೆಗಾಲ ಪ್ರಾರಂಭಗೊಳ್ಳಬೇಕಿದ್ದ ಜೂನ್ ತಿಂಗಳಲ್ಲಿ ಶೇ.೫೩ರಷ್ಟು ಮಳೆ ಕೊರತೆ ಕಾಣಿಸಿಕೊಂಡಿತ್ತು. ತಡವಾದರೂ ಜುಲೈ ತಿಂಗಳಲ್ಲಿ ಮಳೆ ಜೋರಾಗಿ ಬಿದ್ದು, ಹಿಂದಿನ ಕೊರತೆ ಮರೆಯುವಂತಾಗಿತ್ತು. ಜುಲೈ ತಿಂಗಳಲ್ಲಿ ಶೇ.೨೫ರಷ್ಟು ಹೆಚ್ಚು ಮಳೆ ಸುರಿದಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಶೇ.೭೨ರಷ್ಟು ಮಳೆ ಕೊರೆತ ಕಂಡುಬಂದಿರುವುದು ಖಂಡಿತ ಜನತೆ ಹಾಗೂ ಜಿಲ್ಲಾಡಳಿತಗಳನ್ನು ಆತಂಕಕ್ಕೆ ಒಡ್ಡುವ ವಿಷಯ.

ಇನ್ನು ಸೆಪ್ಟೆಂಬರ್ ತಿಂಗಳು ಕರಾವಳಿಯಲ್ಲಿ ಭಾರೀ ಅಲ್ಲದಿದ್ದರೂ, ನಿರಂತರವಾಗಿ ಮಳೆ ಬೀಳುವ ಸಮಯ. ಈ ಸಲದ ಮಟ್ಟಿಗೆ ಇದು ನಿರ್ಣಾ ಯಕ ತಿಂಗಳೆನಿಸಿದೆ. ಹವಾಮಾನ ಇಲಾಖೆ ನೀಡುವ ಮುನ್ಸೂಚನೆ ಪ್ರಕಾರ ಈ ತಿಂಗಳಲ್ಲಿ ದೊಡ್ಡ ಪ್ರಮಾಣ ದಲ್ಲಿಲ್ಲದಿದ್ದರೂ, ಸಾಕಷ್ಟು ಮಳೆ ಬೀಳಲಿದೆ. ಇದು ನಿಜವಾಗಲಿ ಎಂದು ಜಿಲ್ಲೆಯ ರೈತರು ಹಾಗೂ ಜಿಲ್ಲಾಡಳಿತ ಹಾರೈಸುತ್ತಿದೆ.

ಒಣಗುತ್ತಿರುವ ಬೆಳೆ: ಕೃಷಿ ಇಲಾಖೆಯ ಪ್ರಕಾರ ಈ ಬಾರಿ ೩೮,೦೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಹಾಕಿಕೊಂಡಿದ್ದು, ಇದುವರೆಗೆ ೩೫,೫೦೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯ ಬಹುಪಾಲು ಭತ್ತದ ಕೃಷಿ ಮಳೆಯನ್ನೇ ಅವಲಂಬಿತವಾಗಿದೆ. ಒಂದರ್ಥದಲ್ಲಿ ಇದು ಮಳೆಯಾಶ್ರಿತ ಬೆಳೆಯಾಗಿದೆ.

ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಇಳಿಕೆ

ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸ್ವರ್ಣಾ ನದಿಗೆ ಬಜೆಯಲ್ಲಿ ನಿರ್ಮಿಸಲಾದ ಅಣೆಕಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಂಗ್ರಹವಾಗಿರುವ ನೀರಿನ ಮಟ್ಟದಲ್ಲಿ ಇಳಿತ ಕಂಡುಬಂದಿದೆ. ಇಂದು ಬಜೆಯಲ್ಲಿ ನೀರಿನ ಮಟ್ಟ ೫.೧೦ಮೀ. ಇದ್ದರೆ, ಕಳೆದ ವರ್ಷ ಅದು ೫.೮೩ಮೀ. ಇತ್ತು.

ಜುಲೈ ತಿಂಗಳಲ್ಲಿ ಮಾತ್ರ ಈ ಬಾರಿ ಬಜೆ ಅಣೆಕಟ್ಟಿನಲ್ಲಿ ಹೆಚ್ಚಿನ ನೀರಿನ ಸಂಗ್ರಹವಿತ್ತು.(೬.೨೨ಮೀ.). ಆದರೆ ಆಗಸ್ಟ್ ಬಳಿಕ ಮಳೆಯ ಕೊರತೆಯಾಗುತಿದ್ದಂತೆ ನೀರಿನ ಸಂಗ್ರಹದಲ್ಲಿ ಇಳಿತ ಕಂಡುಬಂದಿದ್ದು, ತಿಂಗಳುದ್ದಕ್ಕೂ ಕುಸಿಯುತ್ತಾ ಬರುತ್ತಿದೆ. ಆ.೨೯ರಂದು ೫.೧೫ಮೀ. ನೀರಿನ ಸಂಗ್ರಹವಿತ್ತು.

ಮಳೆಯ ಕೊರತೆಯಿಂದ ಈ ಬಾರಿ ತಡವಾಗಿ ಭತ್ತದ ನಾಟಿ ಕಾರ್ಯ ನಡೆದಿದ್ದು, ಇದೀಗ ಮಳೆಯ ಕೊರತೆಯಿಂದ ಬಹುಪಾಲು ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ. ಜಿಲ್ಲೆಯಲ್ಲಿ ಮುಂಗಾರು ಭತ್ತದ ಕೃಷಿಗೆ ನೀರುಣಿಸುವ ಪದ್ಧತಿ ಇಲ್ಲವಾದರೂ ಈ ಬಾರಿ ಅದಕ್ಕೂ ನೀರಿನ ಕೊರತೆ ಎದುರಾಗುತ್ತಿದೆ. ಪರ್ಯಾಯ ನೀರಿನ ಮೂಲಗಳಾದ ಕೆರೆಗಳು, ಮದಗ, ತೋಡುಗಳು, ಹಳ್ಳಕೊಳ್ಳಗಳಲ್ಲೂ ಈ ಬಾರಿ ನೀರಿನ ಕೊರತೆ ಇರುವುದರಿಂದ ಅಲ್ಲೂ ನೀರನ್ನು ಗದ್ದೆಗೆ ಹಾಯಿಸುವ ಸ್ಥಿತಿಯಲ್ಲಿ ರೈತರಿಲ್ಲದಂತಾಗಿದೆ. ಅಲ್ಲದೇ ಹೊತ್ತಲ್ಲದ ಹೊತ್ತಿನಲ್ಲಿ ಕೈಕೊಡುತ್ತಿರುವ ವಿದ್ಯುತ್ ನೀರನ್ನು ಪಂಪ್ ಮಾಡುವ ಪ್ರಯತ್ನಕ್ಕೆ ತಡೆಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಭತ್ತದ ಗಿಡಗಳು ತೆನೆಗಟ್ಟುವ, ಕಾಳು ಕಟ್ಟುವ ಹಂತಕ್ಕೆ ಬರಲಿವೆ. ಆ ಸಮಯದಲ್ಲಿ ಬುಡದಲ್ಲಿ ನೀರು ನಿಂತಿರಬೇಕಾಗಿದೆ. ಯಾವುದೇ ಮೂಲದಿಂದಾದರೂ ಗದ್ದೆಗೆ ನೀರನ್ನು ಹಾಯಿಸುವಂತೆ ರೈತರಿಗೆ ನಾವು ಸೂಚನೆಗಳನ್ನು ನೀಡುತಿದ್ದೇವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ ಎಂ.ಸಿ. ತಿಳಿಸಿದರು. ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಸಕೈಗೊಂಡು ಗದ್ದೆಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇವೆ ಎಂದವರು ತಿಳಿಸಿದರು.

ನೀರಿನ ಕೊರತೆಯಿಂದ ಭತ್ತದ ಎಲೆಗಳು ಹೊರಬದಿಯಿಂದ ಒಣಗುತ್ತಿದೆ. ಕಾಳುಕಟ್ಟುವ ಹಂತ ಅತ್ಯಂತ ಮುಖ್ಯವಾಗಿರುವುದರಿಂದ ಹೇಗಾದರೂ ನೀರು ಕೊಡುವಂತೆ ತಿಳಿಸಿದ್ದೇವೆ. ಹೀಗಾಗಿ ಸೆಪ್ಟೆಂಬರ್ ತಿಂಗಳು ಭತ್ತ ಕೃಷಿ ಮಟ್ಟಿಗೆ ಅತ್ಯಂತ ಮುಖ್ಯ ಎಂದು ಸೀತಾ ನುಡಿದರು. ಆದರೆ ಸದ್ಯಕ್ಕೆ ಯಾವುದೇ ರೋಗದ ಬಾಧೆಯಾಗಲೀ, ಕೀಟಗಳ ಕಾಟವಾಗಲಿ ಕಾಣಿಸಿಕೊಂಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News