×
Ad

"ಮಹದೇವಪುರದಲ್ಲಿ ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸಲಾಗಿದೆ": ರಾಹುಲ್ ಗಾಂಧಿ ಬಿಡುಗಡೆ ಮಾಡಿದ ದಾಖಲೆಯಲ್ಲೇನಿದೆ?

ಕ್ಷೇತ್ರದ 6.5 ಲಕ್ಷ ಮತದಾರರಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ನಕಲಿ!

Update: 2025-08-07 16:14 IST

ಹೊಸದಿಲ್ಲಿ: ಮಹದೇವಪುರದಲ್ಲಿ ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗ ವಿರುದ್ಧ ದಾಖಲೆ ಸಹಿತ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಾದ್ಯಂತ ಲೋಕಸಭಾ ಚುನಾವಣೆಯಲ್ಲಿ ವಂಚಿಸಲು ಚುನಾವಣಾ ಆಯೋಗವು ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಕಲಿ ಹೆಸರುಗಳು ಮತ್ತು ನಕಲಿ ವಿಳಾಸಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದ ಉದಾಹರಣೆಯನ್ನು ನೀಡಿದ ಅವರು, ಅಲ್ಲಿಯ 6.5 ಲಕ್ಷ ಮತದಾರರಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ನಕಲಿ ಎಂದು ದಾಖಲೆ ಸಹಿತ ವಿವರಿಸಿದ್ದಾರೆ.

"ಮಹದೇವಪುರದಲ್ಲಿ ಕಾಂಗ್ರೆಸ್ ನಡೆಸಿದ ಆಂತರಿಕ ಪರಿಶೀಲನೆಯ ಮೂಲಕ, ಸಾವಿರಾರು ನಕಲಿ ಮತದಾರರು, ಅಮಾನ್ಯ ವಿಳಾಸಗಳು ಹಾಗೂ ಮತದಾರರ ದಾಖಲೆಗಳಲ್ಲಿ ಗಂಭೀರ ಅಕ್ರಮಗಳು ಪತ್ತೆಯಾಗಿವೆ," ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಡೆದ ಕಠಿಣ ಸ್ಪರ್ಧೆಯನ್ನು ಗಾಂಧಿ ಉಲ್ಲೇಖಿಸಿದರು. ಎಣಿಕೆಯಲ್ಲಿ ಬಹುಭಾಗ ಕಾಲ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮುನ್ನಡೆ ಕಾಯ್ದುಕೊಂಡಿದ್ದರೂ, ಅಂತಿಮವಾಗಿ ಬಿಜೆಪಿಯ ಪಿ.ಸಿ. ಮೋಹನ್ 32,707 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದರು.

ಚುನಾವಣಾ ಆಯೋಗದ ವ್ಯವಸ್ಥೆಗಳ ಮೇಲೂ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗವು ಪಕ್ಷಗಳಿಗೆ ಡಿಜಿಟಲ್ ರೂಪದಲ್ಲಿ ಮತದಾರರ ಪಟ್ಟಿ ನೀಡಲು ನಿರಾಕರಿಸುತ್ತಿದೆ. ಈ ಪಟ್ಟಿಯನ್ನು ಮುದ್ರಿತ ರೂಪದಲ್ಲಿ ನೀಡಲಾಗುತ್ತಿದೆ. ನಮಗೆ ಎಲೆಕ್ಟ್ರಾನಿಕ್ ಪಟ್ಟಿ ದೊರೆತಿದ್ದರೆ, 30 ಸೆಕೆಂಡುಗಳಲ್ಲಿ ವಂಚನೆ ಪತ್ತೆಯಾಗುತ್ತಿತ್ತು. ಆಯೋಗದ ಈ ನಡೆಯು ಶಂಕಾಸ್ಪದ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಡಿಜಿಟಲ್ ಸೌಲಭ್ಯಗಳನ್ನು ಬಳಸಿ ಓದಲು ಸಾಧ್ಯವಾಗದಂತಹ ರೀತಿಯಲ್ಲಿ ಮತದಾರರ ಪಟ್ಟಿಯನ್ನು ಕಾಗದದಲ್ಲಿ ಮುದ್ರಿತ ರೂಪದಲ್ಲಿ ನೀಡಲಾಗುತ್ತಿದೆ. ಈ ಮೂಲಕ ಪಕ್ಷಗಳು ಪಟ್ಟಿ ಪರಿಶೀಲನೆ ನಡೆಸುವುದನ್ನು ತಡೆಯಲು ಯತ್ನಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಈ ಬೆಳವಣಿಗೆಯ ಮಧ್ಯೆ, ಮಹದೇವಪುರ ಮತದಾರರ ಪಟ್ಟಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಸಜ್ಜಾಗಿದೆ. ಈ ಮೆರವಣಿಗೆಗೆ ರಾಹುಲ್ ಗಾಂಧಿ ನೇತೃತ್ವ ವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News