ಗಲ್ಫ್ ಪ್ರವೇಶಿಸುವ ಅಮೆರಿಕನ್ ಹಡಗು ಸಮುದ್ರದ ತಳಕ್ಕೆ ಹೋಗಲಿದೆ: ಇರಾನ್ ಎಚ್ಚರಿಕೆ
Photo Credit : aljazeera.com
ಟೆಹ್ರಾನ್: ಗಲ್ಫ್ ಪ್ರದೇಶಕ್ಕೆ ಪ್ರವೇಶಿಸುವ ಯಾವುದೇ ಅಮೆರಿಕನ್ ಹಡಗು ಸಮುದ್ರದ ತಳಕ್ಕೆ ಹೋಗಲಿದೆ ಎಂದು ಇರಾನ್ ಮಿಲಿಟರಿ ವಕ್ತಾರರು ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು Aljazeera ವರದಿ ಮಾಡಿದೆ.
ಗಲ್ಫ್ ಪ್ರವೇಶಿಸುವ ಅಮೆರಿಕದ ನೌಕಾಪಡೆಯ ಹಡಗುಗಳನ್ನು ಮುಳುಗಿಶಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರದೇಶದಲ್ಲಿ ಅಮೆರಿಕದ ಸೈನಿಕ ಚಟುವಟಿಕೆಗಳನ್ನು ಇರಾನ್ ತೀವ್ರವಾಗಿ ವಿರೋಧಿಸುತ್ತಿದ್ದು, ಇಂತಹ ಕ್ರಮಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ವಕ್ತಾರರು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಂದಿದೆ. ಗಲ್ಫ್ ಪ್ರದೇಶದ ಭದ್ರತೆ ಮತ್ತು ಸಮುದ್ರ ಮಾರ್ಗಗಳ ಮೇಲೆ ನಡೆಯುತ್ತಿರುವ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿವೆ.
ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್‌ಗಳಿಗೆ ಯುಎಸ್ ನೌಕಾಪಡೆಯು ಸಾಧ್ಯವಾದಷ್ಟು ಬೇಗ ಬೆಂಗಾವಲು ನೀಡಲು ಆರಂಭಿಸಲಿದೆ ಎಂದು ಹೇಳಿದ್ದರು. ಈ ಕ್ರಮವು ಪ್ರದೇಶದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಭದ್ರತೆಯನ್ನು ಖಚಿತಪಡಿಸಲು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಸಮುದ್ರ ಮಾರ್ಗವಾಗಿದ್ದು, ಇಲ್ಲಿ ಯಾವುದೇ ಮಿಲಿಟರಿ ಉದ್ವಿಗ್ನತೆ ಉಂಟಾದರೆ ಜಾಗತಿಕ ತೈಲ ಮಾರುಕಟ್ಟೆಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗಲ್ಫ್ ಪ್ರದೇಶದ ಭದ್ರತೆ ಕುರಿತ ಆತಂಕಗಳು ಹೆಚ್ಚುತ್ತಿವೆ.