ಸಿದ್ದರಾಮಯ್ಯ, ಕುರುಬರ ನಿಂದನೆ ಖಂಡಿಸಿ ಬಸರಾಳು ಬಂದ್
ಮಂಡ್ಯ, ಆ.13: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುರುಬ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ‘ಬಸರಾಳು ಬಂದ್’ ನಡೆಯಿತು.
ಜಿಲ್ಲಾ ಕುರುಬರ ಸಂಘ, ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸ್ಥಳೀಯರಿಂದ ಬಂದ್ ನಡೆಯಿತು.
ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಇದೆ ವೇಳೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ನಾಗಮಂಗಲ-ಮಂಡ್ಯ ಹೆದ್ದಾರಿ ಸಂಚಾರ ಬಂದ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕುರುಬ ಸಮುದಾಯದ ಜನರು ಜೋಡಿ ಟಗರುಗಳ ಜೊತೆ ಮೆರವಣಿಗೆ ನಡೆಸಿದರು.
ನಂತರ, ಪ್ರತಿಭಟನಾಕಾರರು ಬಸರಾಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಬಂಧಿತ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ತೆರೆದು ಗಡಿಪಾರು ಮಾಡಬೇಕೆಂದರು.
ಪ್ರತಿಭಟನಾಕಾರರನ್ನು ಸಮಧಾನ ಮಾಡಿದ ಎಎಸ್ಪಿಗಳಾದ ತಿಮ್ಮಯ್ಯ ಹಾಗೂ ಗಂಗಾಧರಸ್ವಾಮಿ, ಬಂಧಿತ ಆರೋಪಿಗಳ ಮೇಲೆ ಈಗಾಗಲೇ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಕರಡಿಕೊಪ್ಪಲು ಕೆ.ಸಿ. ಪುಟ್ಟಸ್ವಾಮಿಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಪ್ಪಾಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಕೆ.ಎಚ್.ನಾಗರಾಜು, ಮುಡಾ ನಿರ್ದೇಶಕ ಎನ್.ದೊಡ್ಡಯ್ಯ, ಸಾತನೂರು ಕೃಷ್ಣ, ರಾಜೇಶ್, ಜಿಪಂ ಮಾಜಿ ಸದಸ್ಯ ಪ್ರಸನ್ನ, ದ್ಯಾವಪ್ಪ, ಬಸರಾಳು ಶಂಕರೇಗೌಡ, ರಾಜು, ಸಾವಿತ್ರಮ್ಮ, ಮಹೇಶ್, ಶೈಲೇಂದ್ರ, ಇತರರು ಭಾಗವಹಿಸಿದ್ದರು.