ಮಂಡ್ಯ | ನಾಲೆಯಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರ ಮೃತ್ಯು : ಇಬ್ಬರ ರಕ್ಷಣೆ
ಮಂಡ್ಯ : ನಾಲೆಯ ನೀರಿನಲ್ಲಿ ಮುಳುಗಿದ 6 ಬಾಲಕಿಯರ ಪೈಕಿ 4 ಬಾಲಕಿಯರು ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಮಂಡ್ಯದ ಕೊಪ್ಪಲು ಗ್ರಾಮದ ಬಳಿ ಶನಿವಾರ ನಡೆದಿರುವುದು ವರದಿಯಾಗಿದೆ.
ಕಾವೇರಿ ನದಿಯ ರಾಮಸ್ವಾಮಿ ನಾಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮೈಸೂರಿನ ಹನಿ(14), ಅಫ್ರೀನ್ (13), ಜಾನಿಯಾ ಪರ್ವೀನ್ (13) ಹಾಗೂ ಆಯಿಷಾ(13) ಸಾವನ್ನಪ್ಪಿದ್ದಾರೆ.
ಈ ಬಾಲಕಿಯರು ಮೈಸೂರಿನ ಉದಯಗಿರಿ ಬಡಾವಣೆಯ ಹಾಜಿರಾ ನಿಶ್ವಾನ್ ಅರಬಿಕ್ ವಸತಿ ಶಾಲೆಯ ವಿದ್ಯಾರ್ಥಿನಿಯರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಹಾಜಿರಾ ನಿಶ್ವಾನ್ ಅರಬಿಕ್ ವಸತಿ ಶಾಲೆಯ ಸುಮಾರು 15 ವಿದ್ಯಾರ್ಥಿನಿಯರು ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಬಳಿ ಇರುವ ಕಾವೇರಿ ನದಿಯ ರಾಮಸ್ವಾಮಿ ನಾಲೆಯಲ್ಲಿ ಶಾಲೆಯ ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು ಶನಿವಾರ ಬಂದಿದ್ದರು. ಅಪರಾಹ್ನ 5:30ರ ಸಮಯದಲ್ಲಿ ಓರ್ವ ಬಾಲಕಿ ಆಕಸ್ಮಿಕವಾಗಿ ನಾಲೆಗೆ ಜಾರಿ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಇತರ ಐದು ಮಂದಿ ಬಾಲಕಿಯರು ಮುಂದಾಗಿ ನಾಲೆಗೆ ಇಳಿದಿದ್ದಾರೆ.
ನಾಲೆಯಲ್ಲಿನ ನೀರಿನ ರಭಸಕ್ಕೆ ಆರು ಬಾಲಕಿಯರೂ ಕೊಚ್ಚಿಕೊಂಡು ಹೋಗುತ್ತಿದ್ದಾಗ, ಬೊಬ್ಬೆ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮೂವರು ವಿದ್ಯಾರ್ಥಿನಿಯರನ್ನು ರಕ್ಷಿಸಿದ್ದಾರೆ. ಇತರ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ರಕ್ಷಿಸಲ್ಪಟ್ಟ ಮೂವರ ಪೈಕಿ ಓರ್ವ ಬಾಲಕಿ ಆಯಿಷಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ ಮೂವರಿಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ಮುಂದುವರಿಸಿತ್ತು. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಮೂವರು ಬಾಲಕಿಯರ ಮೃತದೇಹಗಳು ರವಿವಾರ ಸಂಜೆ ಟಿ.ನರಸೀಪುರ ಬಳಿ ಪತ್ತೆಯಾಗಿವೆ.
ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿವಾರ ಜಿಲ್ಲಾಧಿಕಾರಿ ಡಾ.ಕುಮಾರ, ಎಎಸ್ಪಿ ತಿಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.