×
Ad

ಧರ್ಮಸ್ಥಳ | ರಾಜ್ಯದ ಜನರಿಗೆ ಎಸ್‌ಐಟಿ ತನಿಖೆ ಮೇಲೆ ನಿರೀಕ್ಷೆಗಳಿಲ್ಲ, ಎನ್‌ಐಎ ತನಿಖೆ ನಡೆಸಿ : ನಿಖಿಲ್ ಕುಮಾರಸ್ವಾಮಿ

Update: 2025-08-31 00:17 IST

ಮಂಡ್ಯ, ಆ.30 : ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯದ ಜನರಿಗೆ ಎಸ್‌ಐಟಿ ತನಿಖೆ ಮೇಲೆ ನಿರೀಕ್ಷೆಗಳಿಲ್ಲ. ಎನ್‌ಐಎ ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ. ಷಡ್ಯಂತ್ರಕ್ಕೆ ವಿದೇಶಿ ಫಂಡಿಂಗ್ ಶಂಕೆಯಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವ ಬಗ್ಗೆ ಅನುಮಾನ ಇದೆ. ಧರ್ಮಸ್ಥಳ ಪಾವಿತ್ರ್ಯತೆಯನ್ನು ಹಾಳು ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ಆಪಾದಿಸಿದರು.

ಒಬ್ಬರೋ, ಇಬ್ಬರೋ ದೂರು ಕೊಟ್ಟ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದಾರೆ. ಚಿನ್ನಯ್ಯ ಎಂಬ ವ್ಯಕ್ತಿ ಬುರುಡೆ ತಂದು ಧರ್ಮಸ್ಥಳದಲ್ಲಿ ಮಾಸ್ ಮರ್ಡರ್ ನಡೆದಿದೆ ಎಂದು ಬಿಂಬಿಸಿದ್ದ. ಮೊದಲು ಎಫ್‌ಎಸ್‌ಎಲ್ ವರದಿ ಪಡೆದ ಬಳಿಕ ವಿಷಯದ ಗಂಭೀರತೆ ಸರಕಾರ ಅರಿಯಬೇಕಿತ್ತು. ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಬೇಕಿದೆ ಎಂದು ಹೇಳಿದರು.

ಧರ್ಮಸ್ಥಳ ಸತ್ಯಯಾತ್ರೆ: ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ನೈತಿಕ ಬೆಂಬಲ ವ್ಯಕ್ತಪಡಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚನೆಯೆಂತೆ ಆ.31ರಂದು ಜೆಡಿಎಸ್ ವತಿಯಿಂದ ಧರ್ಮಸ್ಥಳ ಸತ್ಯಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಹಾಸನದಲ್ಲಿ ಉಪಹಾರ ಮುಗಿಸಿ ಧರ್ಮಸ್ಥಳಕ್ಕೆ ತೆರಳಲಾಗುವುದು. ನೇತ್ರಾವತಿಯಲ್ಲಿ ಸ್ನಾನ ಮಾಡಿದ ಬಳಿಕ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ. ಜೆಡಿಎಸ್ ಹಾಲಿ, ಮಾಜಿ ಸಂಸದರು, ಸಚಿವರು, ಶಾಸಕರು ಮತ್ತು ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News