×
Ad

ದೇವಾಲಯಗಳಿಗೆ ಉದಾರವಾಗಿ ದೇಣಿಗೆ ನೀಡಿದ ಟಿಪ್ಪು ಮತಾಂಧನಾಗಲು ಹೇಗೆ ಸಾಧ್ಯ? : ಪ್ರೊ.ಭೂಮಿಗೌಡ

Update: 2025-09-06 23:45 IST

ಮಂಡ್ಯ : ಹಿಂದೂ ದೇವಾಲಯಗಳಿಗೆ ಉದಾರವಾಗಿ ದೇಣಿಗೆ ನೀಡಿದ್ದ ಟಿಪ್ಪು ಮತಾಂಧನಾಗಲು ಹೇಗೆ ಸಾಧ್ಯ? ಬ್ರಿಟಿಷರಿಂದ ಟಿಪ್ಪು ಸುಲ್ತಾರನ್ನು ಕೊಲ್ಲಿಸಿದ ದಿವಾನ್ ಪೂರ್ಣಯ್ಯನ ಬಗ್ಗೆ ಏಕೆ ಮಾತನಾಡುವುದಿಲ್ಲ? ಎಂದು ಚಿಂತಕ, ಸಾಹಿತಿ ಪ್ರೊ.ಭೂಮಿಗೌಡ ಪ್ರಶ್ನಿಸಿದ್ದಾರೆ.

ಶ್ರೀರಂಗಪಟ್ಟಣದ ಸಂಜಯ ಪ್ರಕಾಶನ ಸಭಾಂಗಣದಲ್ಲಿ, ಚಿಂತನ ಚಿತ್ತಾರ ಪ್ರಕಾಶನದಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಸ್.ತುಕಾರಾಂ ಅವರ ‘ಲೋಕಪಾವನ- ಪ್ರೊ.ಎಂ.ಕರಿಮುದ್ದೀನ್ ಅವರ ಜೀವನ ಮತ್ತು ಸಹಿಷ್ಣುತೆಯ ಚಿತ್ರಣ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ತೆಗೆದು ಹಾಕಲು ಹಿಂದುತ್ವವಾದಿಗಳು ಹುನ್ನಾರ ನಡೆಸಿದರು. ದೇವಾಲಯಗಳನ್ನು ನಾಶಪಡಿಸಿದ ಎಂದು ಅಪಪ್ರಚಾರ ಮಾಡಿದರು. ರಾಜಕೀಯ ಲಾಭಕ್ಕಾಗಿ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಸೃಷ್ಟಿಸಿದರು ಎಂದು ಅವರು ಕಿಡಿಕಾರಿದರು.

ಪ್ರೊ.ಕರಿಮುದ್ದೀನ್ ನನಗೆ ಕನ್ನಡದ ಪ್ರಾಧ್ಯಾಪಕರಾಗಿದ್ದವರು. ಕಬ್ಬಿಣದ ಕಡಲೆಯಾಗಿದ್ದ ಶಬ್ದಮಣಿದರ್ಪಣ ಹಳೆಗನ್ನಡ ಕಾವ್ಯವನ್ನು ಮನ ಮುಟ್ಟುವಂತೆ ಬೋಧಿಸಿದ್ದರು. ಅವರ ವಿದ್ವತ್ತು ಬೆರಗು ಹುಟ್ಟಿಸುತ್ತಿತ್ತು. ಅವರು ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದರು. ಎಲ್ಲ ಧರ್ಮಗಳ ಮಾನವೀಯ ಸಾರವನ್ನು ಗ್ರಹಿಸಿ ಇತರರಿಗೂ ಉಣಬಡಿಸುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ಸುಜಯಕುಮಾರ್, ನಿವೃತ್ತ ತಹಶೀಲ್ದಾರ್ ಬಾಲಸುಬ್ರಹ್ಮಣ್ಯ ಮಾತನಾಡಿದರು. ಪ್ರೊ.ಇಲ್ಯಾಸ್ ಅಹ್ಮದ್ ಖಾನ್, ಲೇಖಕ ಪ್ರೊ.ಎಸ್.ತುಕಾರಾಂ, ಚಿಂತನ ಚಿತ್ತಾರ ಪ್ರಕಾಶನದ ನಿಂಗರಾಜ್ ಚಿತ್ರಣ್ಣನವರ್, ಸಂಜಯ ಪ್ರಕಾಶನದ ಎಸ್.ಎಂ.ಶಿವಕುಮಾರ್, ವಕೀಲರಾದ ಸಿ.ಎಸ್.ವೆಂಕಟೇಶ್, ಎಸ್.ಆರ್.ಸಿದ್ದೇಶ್, ಧನಂಜಯ ಬ್ಯಾಡರಹಳ್ಳಿ, ಕ್ಯಾತನಹಳ್ಳಿ ಚಂದ್ರಣ್ಣ, ಶೀಲಾ ನಂಜುಂಡಯ್ಯ, ರೈತ ಮುಖಂಡ ಪಾಂಡು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News