ಮಂಡ್ಯ | ಕಾವೇರಿ ಆರತಿ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
ಮಂಡ್ಯ, ಸೆ.26: ರಾಜ್ಯ ಸರಕಾರವು ಶುಕ್ರವಾರ ಸಂಜೆ ಕೆಆರ್‌ಎಸ್‌ನಲ್ಲಿ ಪ್ರಾಯೋಗಿಕವಾಗಿ ಕಾವೇರಿ ಆರತಿ ನಡೆಸುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕೆಆರ್‌ಎಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ದಸರಾ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಕೆಆರ್‌ಎಸ್‌ನಲ್ಲಿ 5 ದಿನಗಳ ಕಾಲ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದು, ಇದಕ್ಕೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ನಗರದಿಂದ ಕೆಆರ್‌ಎಸ್ ಚಲೋ ನಡೆಸಿದ ಪ್ರತಿಭಟನಾಕಾರರು, ಹೈಕೋರ್ಟ್ ಮಧ್ಯಂತರ ತಡೆ ಇದ್ದಾಗಿಯೂ ಕೆಆರ್‌ಎಸ್ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಕಾವೇರಿ ಆರತಿ ನಡೆಸುವ ಸರಕಾರದ ನಿರ್ಧಾರ ಉದ್ಧಟತನದ್ದು ಎಂದು ಕಿಡಿಕಾರಿದರು.
ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್‌ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಯೋಜನೆಗಳನ್ನು ಮಾಡಬಾರದು ಎಂದು ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದ್ದರೂ ರಾಜ್ಯ ಸರಕಾರ ಕಾವೇರಿ ಆರತಿಯನ್ನು ಮಾಡುವ ಮೂಲಕ ಜನರಲ್ಲಿ ಮೌಢ್ಯವನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಜನತೆಯ ತೀವ್ರ ವಿರೋಧವಿದ್ದರೂ ಮಾಡಿಯೇ ತೀರುತ್ತೇನೆ ಎಂಬ ಉದ್ಧಟತನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದ್ದಾಗಿದೆ. ಯಾವುದೇ ಕಾರಣಕ್ಕೂ ಸುಮಾರು ಎರಡು ಸಾವಿರ ಕೋಟಿ ರೂ. ವೆಚ್ಚದ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ.ನಾಗಣ್ಣಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಇಂಡುವಾಳು ಚಂದ್ರಶೇಖರ, ಕೆ.ಬೋರಯ್ಯ, ಮುದ್ದೇಗೌಡ, ಕೆಂಪೇಗೌಡ, ಶಿವಳ್ಳಿ ಚಂದ್ರು, ಎಸ್.ನಾರಯಣ್, ಸಿ.ಕುಮಾರಿ, ಎಂ.ವಿ.ಕೃಷ್ಣ, ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.