×
Ad

ತಡೆಯಾಜ್ಞೆ ನಡುವೆಯೂ ಕೆಆರ್‌ಎಸ್‍ನಲ್ಲಿ ʼಕಾವೇರಿ ಆರತಿʼ

ಮುಂದೆಯೂ ಕಾರ್ಯಕ್ರಮ ಮುಂದುವರೆಯಲಿದೆ : ಡಿ.ಕೆ.ಶಿವಕುಮಾರ್

Update: 2025-09-27 00:13 IST

ಮಂಡ್ಯ, ಸೆ.26: ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನಡುವೆಯೂ, ಗಂಗಾರತಿ ಮಾದರಿಯಲ್ಲಿ ಜಿಲ್ಲೆಯ ಕೆಆರ್‌ಎಸ್‍ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಸಂಜೆ ಕಾವೇರಿ ಆರತಿ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು

ಪರಿಸರ ಮತ್ತು ಅಣೆಕಟ್ಟೆ ರಕ್ಷಣೆ ದೃಷ್ಟಿಯಿಂದ ಕೆಆರ್‌ಎಸ್‍ನಲ್ಲಿ ಕಾವೇರಿ ಆರತಿ ಮತ್ತು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಬಾರದೆಂದು ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಆದರೂ, ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೆಆರ್‌ ಎಸ್‍ನಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ನಡೆಸಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಂದಿನ ದಿನಗಳಲ್ಲಿ ಉದ್ದೇಶಿತ ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದರು.

ಯಾರೇ ತೊಂದರೆ ಮಾಡಬಹುದು, ಪ್ರಾರ್ಥನೆ ಯಾರ ಮನೆ ಸ್ವತ್ತಲ್ಲ. ಇಂದಿನಿಂದ ಐದು ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ನಾವು ಸಿದ್ಧತೆ ಮಾಡಿರುವ ರೀತಿ ಕಾವೇರಿ ಆರತಿ ಮಾಡ್ತೀವಿ ಎಂದು ಶಿವಕುಮಾರ್ ಹೇಳಿದರು.

ನಮ್ಮ ರಾಜ್ಯದಲ್ಲಿ ಜೀವನದಿ ಕಾವೇರಿ. ಹಳೆ ಮೈಸೂರು ಭಾಗದಲ್ಲಿ ಮೂರು ಕೋಟಿ ಜನರಿಗೆ ಕಾವೇರಿ ತಾಯಿ ನೀರು ಕೊಡ್ತಾ ಇದ್ದಾಳೆ. ತಮಿಳುನಾಡು, ಪುದುಚೇರಿಗೂ ನೀರು ಕೊಡ್ತಾ ಇದ್ದಾಳೆ. ಇಂತಹ ತಾಯಿಗೆ ನಮನ ಸಲ್ಲಿಸುವ ಕೆಲಸ ಆಗುತ್ತೆ ಎಂದು ಅವರು ನುಡಿದರು.

ಕಾವೇರಿ ಕನ್ನಡಿಗರ ಭಾಗ್ಯ ದೇವತೆ. ನಮ್ಮ ರೈತರ ಜೀವದಾನ ಕಾವೇರಿ. 10 ಸಾವಿರ ಮಂದಿ ಕೂತು ಆರತಿ ನೋಡಬೇಕೆಂದು ಕಾರ್ಯಕ್ರಮ ರೂಪಿಸಿದ್ದೋ. ಕೆಲವು ಅಡೆತಡೆಗಳು ಬಂದು ಅದು ಸಾಧ್ಯ ಆಗಿಲ್ಲ. ಇಂದು ಸಾಂಕೇತಿಕವಾಗಿ ಕಾವೇರಿ ಆರತಿ ಮಾಡ್ತಾ ಇದೀವಿ. ಆಗಮ ಶಾಸ್ತ್ರದ ಮೂಲಕ ಇಂದು ಕಾವೇರಿ ಆರತಿ ನಡೆಯುತ್ತಿದೆ. ಗಂಗಾರತಿಯನ್ನು ಚಲುವರಾಯಸ್ವಾಮಿ ತಂಡ ವೀಕ್ಷಣೆ ಮಾಡಿ ಬಂದಿದೆ. ಅವರು ಸಹ ನಮಗೆ ವರದಿ ಕೊಟ್ಟಿದ್ದಾರೆ. ಆ ಹಿನ್ನೆಲೆ ನಾವು ಕಾವೇರಿ ಆರತಿ ರೂಪಿಸಿದ್ದೇವೆ. ಯಾರೇ ತೊಂದರೆ ಮಾಡಬಹುದು, ಪ್ರಾರ್ಥನೆ ಯಾರ ಮನೆ ಸ್ವತ್ತಲ್ಲ ಎಂದು ಅವರು ಸರಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡರು.

ಇಂದಿನಿಂದ ಐದು ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ನಾವು ಸಿದ್ಧತೆ ಮಾಡಿರುವ ರೀತಿ ಕಾವೇರಿ ಆರತಿ ಮಾಡ್ತೀವಿ. ತಾಯಿ ಚಾಮುಂಡೇಶ್ವರಿ ನಮಗೆ ಶಕ್ತಿ ಕೊಡುತ್ತಾಳೆ. ಕನ್ನಂಬಾಡಿ ಕಟ್ಟೆ ನಮ್ಮೇಲ್ಲರ ಅನ್ನದ ತಟ್ಟೆ. ಮೇಕೆದಾಟಿಗಾಗಿ ನಾವು ಹೆಜ್ಜೆ ಹಾಕಿದ್ದೇವೆ. ಮೇಕೆದಾಟು ಕಟ್ಟಲು ಕಾವೇರಿ ತಾಯಿ ಆಶೀರ್ವದಿಸಲಿ ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ಈ ಆರತಿ ಕಾರ್ಯಕ್ರಮವು ಕಾವೇರಿ ನದಿಗೆ ಸಲ್ಲಿಸುವ ನಮನ ಎಂದು ಕಿರುಚಿತ್ರದ ಮೂಲಕ ಸಂದೇಶ ನೀಡಲಾಯಿತು.

ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚಿನ ವೈದಿಕರ ತಂಡ ಮಂತ್ರಘೋಷ ಮೊಳಗಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂತನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಮನೋಹರ್ ಪ್ರಸಾದ್, ಇತರರು ಉಪಸ್ಥಿತರಿದ್ದರು.

ಇಂದಿನಿಂದ ಐದು ದಿನ ನಡೆಯುವ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಆರ್‌ಎಸ್ ಬೃಂದಾವನಕ್ಕೆ ಪ್ರವಾಸಿಗರಿಗೆ ಉಚಿತ ಪ್ರವೇಶ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News