×
Ad

ಮಂಡ್ಯ | ಸಿಜೆಐ ಮೇಲೆ ಶೂ ಎಸೆದ ಘಟನೆಗೆ ಖಂಡನೆ

Update: 2025-10-08 20:12 IST

ಮಂಡ್ಯ, ಅ.8 : ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ ದಲಿತ ಸಾಹಿತ್ಯ ಪರಿಷತ್ತು ಹಾಗೂ ಜನಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೃತ್ಯ ಎಸಗಿದ ರಾಕೇಶ್ ಕಿಶೋರ್ ವಿರುದ್ಧ ಘೋಷಣೆ ಕೂಗಿ, ಕೂಡಲೇ ಆತನನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ವಿರೋಧಿ ಕೃತ್ಯ ಎಸಗಿ, ವಕೀಲ ವೃತ್ತಿಗೆ ಅಪಚಾರ ಮಾಡಿರುವ, ದೇಶದ್ರೋಹಿ ರಾಕೇಶ್ ಕಿಶೋರ್ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.

ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ,  ನ್ಯಾಯಮೂರ್ತಿಗಳಿಗೆ ಶೂ ಎಸೆದು ಕೆಟ್ಟ ನಡವಳಿಕೆ ಪ್ರದರ್ಶಿಸಿರುವ ರಾಕೇಶ್ ಕಿಶೋರ್, ತಾನು ಮಾಡಿದ ಕೃತ್ಯವನ್ನು ಸಮರ್ಥನೆ ಮಾಡಿಕೊಂಡಿದ್ದಾನೆ. ನ್ಯಾಯಾಂಗಕ್ಕಿಂತ, ಸಂವಿಧಾನಕ್ಕಿಂತ ತಾನು ದೊಡ್ಡವನು ಎಂದು ಇಡೀ ದೇಶಕ್ಕೆ ಸಾರಲು ಹೊರಟಿದ್ದಾನೆ ಎಂದು ಅವರು ಕಿಡಿಕಾರಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ರಾಕೇಶ್ ಕಿಶೋರ್ 70ರ ಹಿರಿಯ ವ್ಯಕ್ತಿಯಾದರೂ ಅವರ ದೇಹದಲ್ಲಿ ಕೋಮುದ್ವೇಷದ ವಿಷ ತುಂಬಿರುವುದು ಈ ಕೃತ್ಯದಿಂದ ವ್ಯಕ್ತವಾಗಿದೆ. ಇದು ರಾಕೇಶ್ ಒಬ್ಬರೇ ಮಾಡಿರುವ ಕೃತ್ಯವಲ್ಲ, ಬಿಜೆಪಿಯವರು, ಆರ್‌ಎಸ್‍ಎಸ್‍ನವರು ಅತ್ಯಂತ ವ್ಯವಸ್ಥಿತವಾಗಿ ಮಾಡಿಸಿರುವ ಕೃತ್ಯ ಎಂದು ಆರೋಪಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ವಕೀಲರಾದ ಬಿ.ಟಿ.ವಿಶ್ವನಾಥ್, ಲಕ್ಷ್ಮಣ್ ಚೀರನಹಳ್ಳಿ, ಎಂ.ಎಲ್.ತುಳಸೀಧರ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ರೈತ, ದಲಿತ, ಮುಸ್ಲಿಂ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಾದ ಮುಕುಂದ, ದೇವರಾಜ್ ಕೊಪ್ಪ, ಕಾರಸವಾಡಿ ಮಹದೇವ, ಎಲ್.ಸಂದೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News